ಜಿಲ್ಲೆ

ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್: ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಟೀಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ದೇಶದ ಜನರಿಗೆ ಕಾಂಗ್ರೆಸ್ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಕುರಿತು ಮಾತನಾಡುವ ನೈತಿಕತೆಯಿಲ್ಲ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಅಧ್ಯಕ್ಷ ವೆಂಕಟಗಿರಿಯಯ್ಯ ಟೀಕಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯಿಂದ ಆಯೋಜಿಸಿದ್ದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ವ್ಯವಸ್ಥೆ ವಿರುದ್ಧ ಖಂಡನಾ ರ‌್ಯಾಲಿ ಹಾಗೂ ಬಹಿರಂಗ ಸಭೆ ಮತ್ತು ಪ್ರೊ.ಬಿ.ಕೃಷ್ಣಪ್ಪ ಅವರ 86ನೇ ಜನ್ಮದಿನೋತ್ಸವ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಸಂವಿಧಾನ ಉಳಿವಿಗೆ ಹೋರಾಟ ಮಾಡುತ್ತಿದೆ ಎಂದು ಹೇಳುವ ಪಕ್ಷ ಅಂಬೇಡ್ಕರ್ ಅವರನ್ನು ಸೋಲಿಸಿದವರು, ಇಂದು ಸಂವಿಧಾನ ಉಳಿಸಲು ಸಾಧ್ಯವೇ?. ಜತೆಗೆ ದೇಶಕ್ಕೆ ಸಂವಿಧಾನ ಕೊಡಲಿಕ್ಕೆ ಹೋದಾಗಲೂ ಅಂಬೇಡ್ಕರ್ ನಡೆ ವಿರೋಧಿಸಿದ್ದೀರಾ ಎಂದು ಆರೋಪಿಸಿದರು.

ಸಂವಿಧಾನದಲ್ಲಿ ಆರೋಗ್ಯ, ಶಿಕ್ಷಣ ಉಚಿತ, ಭೂಮಿ, ಕೈಗಾರಿಕೆ ರಾಷ್ಟ್ರೀಕರಣ, ಆಸ್ತಿಯ ಹಕ್ಕು ಎಲ್ಲಿತನಕ ಇರುತ್ತದೆಯೋ ಅಲ್ಲಿತನ ಜಾತ್ಯಾತೀತ ರಾಷ್ಟ್ರ ಆಗುವುದಿಲ್ಲ ಎನ್ನುವುದನ್ನು ಅಂಬೇಡ್ಕರ್ ಅವರು ಸೇರಿಸಲು ಹೊರಟಾಗ ಅದನ್ನು ವಿರೋಧಿಸಿದ್ದು ಕಾಂಗ್ರೆಸ್. ನೀವು ಸಂವಿಧಾನದ ಬಗ್ಗೆ ಪ್ರಜಾಪ್ರಭುತ್ವದ ವಿಷಯ ಮಾತನಾಡಿ ನಮ್ಮ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತದಾರರಿಗೆ ಶಿಕ್ಷಣ, ಭೂಮಿ, ಆಸ್ತಿ, ಉದ್ಯೋಗ, ನೌಕರಿ ಕೊಡಬೇಕು ಎನ್ನವ ನೀತಿಯನ್ನಿಟ್ಟು ಚುನಾವಣೆ ಮಾಡಿ ಎಂದು ಸಂವಿಧಾನ ಹೇಳಿದರೆ ನೀವು ರಾಜಕಾರಣಿಗಳು ಜನರಿಗೆ ಆಸೆ ಆಮಿಷಗಳನ್ನು ತೋರಿಸಿ ಏನು ಮಾಡುತ್ತಿದ್ದೀರಾ?. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜನರಿಗೆ ಉಚಿತವಾಗಿ ಅಕ್ಕಿ ನೀಡುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರೇ ದಲಿತರಿಗೆ ಮೀಸಲಿಟ್ಟಿದ್ದ ಅನುದಾನವನ್ನು 11 ಸಾವಿರ ಕೋಟಿ ರೂ ತೆಗೆದುಕೊಂಡಿದ್ದಾರೆ. ಜತೆಗೆ 85 ಸಾವಿರ ಕೋಟಿ ರೂಗಳನ್ನು ಸಿದ್ದರಾಮಯ್ಯ ಲೂಟಿ ಮಾಡಿದ್ದಾರೆ. ನೀವು ವಾಪಸ್ ಕೊಟ್ಟರೆ ಒಬ್ಬ ದಲಿತನ ಮನೆಗೆ 25 ಲಕ್ಷ ರೂ ಸಿಗುತ್ತದೆ. ಹಾಗಾದರೆ ನಿಮಗೆ ತಾಕತ್ ಇದೆಯೇ ಎಂದು ಸವಾಲು ಹಾಕಿದರು.

ರಾಜ್ಯ ಸರ್ಕಾರ ಎಚ್.ಕಾಂತರಾಜ್ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ’ಜಾತಿ ಜನಗಣತಿ’ ವರದಿ ಈ ಕೂಡಲೇ ಜಾರಿಯಾಗಬೇಕು. ದಲಿತ, ಶೋಷಿತ ತಳ ಸಮುದಾಯಗಳ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಅನ್ನೋದಯಕ್ಕಾಗಿ ಶೇ.75ರ ಮೀಸಲಾತಿ ನೀಡಬೇಕು. ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಲ್ಲಿ ನಡೆದಿರುವ ಬಹುಕೋಟಿ ರೂ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಮಿತಿಯ ಜಿಲ್ಲಾಧ್ಯಕ್ಷ ಬಿ.ಆನಂದ್, ರಂಗನಾಥ, ಮೈಸೂರು ವಿಭಾಗೀಯ ಸಂಚಾಲಕ ಕೆ.ಎಂ.ಅನಿಲ್ಕುಮಾರ್, ಮುಖಂಡರಾದ ಶಿರಾ ಲೋಕೇಶ್, ಭಾಗ್ಯಮ್ಮ ಆತಗೂರು, ಹೊನ್ನಯ್ಯ ಟಿ.ಮಲ್ಲಿಗೆರೆ, ಎನ್.ಸಿ.ರಾಜು ನಿಡಘಟ್ಟ, ಸುರೇಶ್ ಮರಳಗಾಲ ಇತರರಿದ್ದರು.

ಬಹಿರಂಗ ಸಭೆಗೂ ಮುನ್ನ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಸಮಿತಿಯ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.