ಜಿಲ್ಲೆ

ಡಿವೈಎಸ್ಪಿ, ಸಿಪಿಐ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

reportermys

ಮಂಡ್ಯ: ಮಳವಳ್ಳಿ ತಾಲೂಕು ನಂಜೇಗೌಡನದೊಡ್ಡಿ ಗ್ರಾಮದ ದಲಿತ ಯುವತಿ ಮೇಘಶ್ರೀಯನ್ನು ಮಾರ್ಯಾದೆ ಹತ್ಯೆ ಮಾಡಲಾಗಿದ್ದು, ಈ ಬಗ್ಗೆ ಸರಿಯಾದ ತನಿಖೆ ನಡೆಸಿದ ಶ್ರೀರಂಗಪಟ್ಟಣ ಡಿವೈಎಸ್ಪಿ ಅರುಣ್ ನಾಗೇಗೌಡ ಹಾಗೂ ಸಿಪಿಐ ಪ್ರಭಾಕರ್ ಅಮಾನತು ಮಾಡಬೇಕು. ಅಂತೆಯೆ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳು ಪ್ರತಿಭಟಿಸಿದವು.
ರೈತ ಸಭಾಂಗಣದ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾ ಎಸ್ಪಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಮೇಘಶ್ರೀಯನ್ನು ಪ್ರೀತಿಸಿ ಮದುವೆಯಾಗಿದ್ದ ಪಾಂಡವಪುರ ತಾಲೂಕು ತಿರುಮಲಾಪುರ ಗ್ರಾಮದ ಟಿ.ಕೆ.ಸ್ವಾಮಿ ತನ್ನ ಕುಟುಂಬದವರೊಂದಿಗೆ ಸೇರಿ ಜಾತಿಯ ಕಾರಣಕ್ಕೆ ಹತ್ಯೆ ಮಾಡಿದ್ದಾರೆ. ಈ ವಿಚಾರ ಸ್ಥಳೀಯರಿಂದ ಮೇಘಶ್ರೀ ಕುಟುಂಬದವರಿಗೆ ಗೊತ್ತಾಗಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಅರುಣ್ ನಾಗೇಗೌಡ ಮತ್ತು ಸಿಬ್ಬಂದಿ ನಿರ್ಲಕ್ಷೃತನ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಬೇರೆ ಅಧಿಕಾರಿ ನೇಮಿಸಬೇಕು. ಜಿಲ್ಲಾ ಎಸ್ಪಿ ಉಸ್ತುವಾರಿ ನೋಡಿಕೊಳ್ಳಬೇಕು. ಮರ್ಯಾದೆಗೇಡು ಹತ್ಯೆ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಕಾರ್ಯಕ್ರಮ ರೂಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗುರುಪ್ರಸಾದ್ ಕೆರಗೋಡು, ಕೆಂಪಣ್ಣ ಸಾಗ್ಯ, ಪ್ರೊ.ಮಹದೇವು, ಕುಬೇರಪ್ಪ, ದೇವಿ, ಸುಶೀಲಾ, ಪೂರ್ಣಿಮಾ ಇತರರಿದ್ದರು.