ಜಿಲ್ಲೆ

ಗ್ಯಾರಂಟಿ ಸಾಕು, ಶಾಶ್ವತ ಪರಿಹಾರ ಕೊಡಿ: ನಗರದಲ್ಲಿ ದಸಂಸ ಕಾರ್ಯಕರ್ತರ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಸೋಮವಾರ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜನಾಗ್ರಹ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರೈತ ಸಭಾಂಗಣ ಆವರಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರದ ಗ್ಯಾರಂಟಿ ಸಾಕು ಮಾಡಿ, ಶಾಶ್ವತ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸಾಮಾಜಿಕ, ಆರ್ಥಿಕ ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ ಸಮಾನತೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಎಚ್.ಕಾಂತರಾಜ್ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಜನಗಣತಿ ವರದಿಯನ್ನು ಸಂಪುಟ ಮತ್ತು ಅಧಿವೇಶನದಲ್ಲಿ ಅಂಗೀಕರಿಸಿ ಜಾರಿಗೊಳಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿರಿಸುವ ಪರಿಶಿಷ್ಟ ಜಾತಿ, ಪಂಗಡಗಳ ಉಪ ಯೋಜನಾ ಕಾಯ್ದೆಯಲ್ಲಿ ಮೀಸಲು ಅನುದಾನವನ್ನು ಹಿಂಪಡೆದುಕೊಳ್ಳುವ ಸರ್ಕಾರದ ಅವಕಾಶವನ್ನು ಕೈ ಬಿಡುವ ತಿದ್ದುಪಡಿ ಮಸೂದೆಯನ್ನು ಮಂಡಿಸಬೇಕು. ಈಗಾಗಲೇ ಕಡಿತವಾಗಿರುವ ಪರಿಶಿಷ್ಟರ ಅನುದಾನ ಕ್ರೂಡೀಕರಿಸಿ ಪರಿಶಿಷ್ಟ ಸಮುದಾಯದ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ ವಿಶೇಷ ಅನುದಾನ ಘೋಷಿಸಬೇಕು. ಯುವ ಜನತೆಗೆ ಕೌಶಲ ತರಬೇತಿ ನೀಡಿ ಸ್ವಯಂ ಉದ್ಯೋಗ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಭೂಮಿ ಪರ ಬಾರೆ ನಿಷೇಧ ಕಾಯ್ದೆ ಸಮಗ್ರ ತಿದ್ದುಪಡಿ ಮಾಡಿ ಭೂ ರಹಿತ ಕೃಷಿ ಕಾರ್ಮಿಕರಿಗೆ ತಲಾ 5 ಎಕರೆ ನೀಡಿ ಭೂಮಿ ಹಂಚಿಕೆ ಮಾಡಿ ಹಕ್ಕು ಖಾತ್ರಿಪಡಿಸುವ ಕರ್ನಾಟಕ ಸಮಗ್ರ ಭೂ ಕಾಯ್ದೆಯನ್ನು ಜಾರಿಗೊಳಿಸಬೇಕು, ಅನಾಗರಿಕ ಅಸ್ಪಶ್ಯತೆ ಆಚರಣೆ ಕೊನೆಗಾಣಿಸಲು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಪ್ರತಿನಿಧಿ ಒಳಗೊಂಡ ಜಾಗತಿಕ ಸಮಾವೇಶ ನಡೆಸಬೇಕು. ಅಸ್ಪಶ್ಯತೆ ನಿರ್ಮೂಲನೆಗೆ ಕ್ರಿಯಾ ಯೋಜನೆ ರೂಪಿಸಿ ಜಾರಿಗೊಳಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಸಬೇಕು ಎಂದು ಆಗ್ರಹಿಸಿದರು.
ಮೀಸಲು ಪ್ರಮಾಣಕ್ಕೆ ಮಿತಿ ಏರಿರುವ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಆಳುವ ಸರ್ಕಾರಗಳು ಮೇಲ್ಮನವಿ ಸಲ್ಲಿಸದಿರುವುದು ಸಾಮಾಜಿಕ ನ್ಯಾಯಕ್ಕೆ ಬಗೆದ ದ್ರೋಹವಾಗಿದೆ. ಆದ್ದರಿಂದ ಪರಿಶಿಷ್ಟರಿಗೆ ಜನಸಂಖ್ಯೆವಾರು ಮೀಸಲು ಹೆಚ್ಚಿಸುವ ನ್ಯಾ.ನಾಗಮೋಹನ್ ದಾಸ್ ಹಾಗೂ ಮೀಸಲು ವರ್ಗೀಕರಣಗೊಳಿಸಲು ನ್ಯಾ.ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಬ್ರಾಹ್ಮಣ್ಯವಾದಿ, ಮನುಸ್ಮತಿ ಆಧಾರಿತ ರಾಷ್ಟ್ರೀಯ ಶಿಕ್ಷಣ ನೀತಿ ಕೈ ಬಿಟ್ಟು ಶಿಕ್ಷಣ ತಜ್ಞರ ಆಯೋಗ ರಚಿಸಿ ಏಕರೂಪದ ಸಮಾನ ಶಿಕ್ಷಣ ನೀತಿ ಜಾರಿಗೊಳಿಸಿ ಎಲ್ಲರಿಗೂ ಉಚಿತ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.
ಅಂತೆಯೇ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಪದ್ಧತಿ ಕೈ ಬಿಟ್ಟು ನೇರ ನೇಮಕಾತಿ ಮಾಡಿಕೊಳ್ಳಬೇಕು. ಸಾರಿಗೆ ನಿಗಮದ ಚಾಲಕರು, ನಿರ್ವಾಹಕರು, ಕಂದಾಯ ಇಲಾಖೆ ಗ್ರಾಮ ಸಹಾಯಕರು, ನೀರಾವರಿ ಇಲಾಖೆ ನೀರುಗಂಟಿಗಳನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಉಚಿತ ಆರೋಗ್ಯ ವ್ಯವಸ್ಥೆ ಜಾರಿಗೆ ತರಬೇಕು. ಸರ್ಕಾರಿ ಕಚೇರಿಗಳಲ್ಲಿ ಎಲ್ಲ ಧರ್ಮಗಳ ಸ್ಥಾಪಕರ ಭಾವಚಿತ್ರ ಕಡ್ಡಾಯಗೊಳಿಸಬೇಕು. ಮಂಡ್ಯ ನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಗೆ 5 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಅನಿಲ್ಕುಮಾರ್ ಕೆರಗೋಡು, ಕೆ.ಎಂ.ಶ್ರೀನಿವಾಸ್, ಈಚಗೆರೆ ನಾಗರಾಜ್, ಎಸ್.ಕುಮಾರ್, ಬಾಲರಾಜ್, ಮಾರಪ್ಪ ದ್ಯಾವಪಟ್ಟಣ, ಹರಿಕುಮಾರ್, ಗೀತಾ ಮೇಲುಕೋಟೆ, ಬಿ.ಎಂ.ಸೋಮಶೇಖರ, ಬಿ.ಆನಂದ ಇತರರಿದ್ದರು.