ಮಂಡ್ಯ: ಪರಿಶಿಷ್ಟ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿ ಆವರಣದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು, ತಮಟೆ ಸದ್ದಿನೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಸಂವಿಧಾನದ ಮೂಲ ಉದ್ದೇಶಕ್ಕೆ ಭಂಗ ತರುವ ದುಷ್ಟ ಪ್ರಯತ್ನ ನಡೆಸಿದೆ. ಸರ್ಕಾರದ ಸಂಪುಟದಲ್ಲಿರುವ ಸಚಿವರು ಸಂವಿಧಾನದ ಆಶಯಕ್ಕೆ ಚ್ಯುತಿ ಬರುವಂಥ ಮಾತುಗಳನ್ನು ಆಡುತ್ತಿದ್ದಾರೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವಂಥ ಸಂಚು ನಡೆದಿದೆ ಎಂದು ದೂರಿದರು
ಬಿಜೆಪಿ ಸರ್ಕಾರಕ್ಕೆ ಬೆನ್ನೆಲುಬು ಆಗಿರುವ ಆರ್‌ಎಸ್‌ಎಸ್ ಜಾತಿವಾದಿ, ಕೋಮುವಾದಿ ಮತ್ತು ಕಾರ್ಪೋರೇಟ್ ಶಕ್ತಿಗಳ ಹಿತರಕ್ಷಕ ವಾಗಿದೆ. ಇಂತಹ ಜನವಿರೋಧಿ ಶಕ್ತಿಗಳ ಕೈಯಲ್ಲಿ ಅಧಿಕಾರದ ಚುಕ್ಕಾಣಿ ಇರುವುದು ಆತಂಕಕಾರಿ. ದೇಶದ ಹಲವು ಕಡೆ ದಲಿತರು, ಶೋಷಿತರು, ಆದಿವಾಸಿಗಳು, ಧಾರ್ಮಿಕ ಅಲ್ಪ ಸಂಖ್ಯಾತರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿದೆ. ಮತ್ತೊಂದೆಡೆ ದಲಿತರ ಮೂಲ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಸ್ತ್ರೀ ಶಕ್ತಿ ಸಂಘಗಳಿಗೆ 25 ಲಕ್ಷ ರೂ. ಸಹಾಯಧನ ನೀಡಬೇಕು. ಪರಿಶಿಷ್ಟರ ಅಭಿವೃದ್ಧಿ ನಿಗಮಗಳಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಎಲ್ಲರಿಗೂ ಕನಿಷ್ಠ 10 ಲಕ್ಷ ರೂ. ನೀಡಬೇಕು. ವಿವಿಧ ನಿಗಮಗಳಲ್ಲಿ ನಡೆದಿರುವ ಗಂಗಕಲ್ಯಾಣ ಯೋಜನೆ ಹಗರಣವನ್ನು ತ್ವರಿತಗತಿಯಲ್ಲಿ ತನಿಖೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. 2019-20ನೇ ಸಾಲಿನಿಂದ 2022-23ನೇ ಸಾಲಿನ ಗಂಗಕಲ್ಯಾಣ ಯೋಜನೆಯ ಕೊಳವೆ ಬಾವಿಗಳನ್ನು ಕೊರೆಯಲು ಕೂಡಲೇ ಆದೇಶ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು
ಮಂಡ್ಯ ನಗರದ ಡಾ.ಅಂಬೇಡ್ಕರ್ ರಸ್ತೆಗೆ ಪರ್ಯಾಯ ಹೆಸರು ನಾಮಕರಣ ಮಾಡಬಾರದು. ಅಂಬೇಡ್ಕರ್ ವಸತಿ ಯೋಜನೆ ಫಲಾನುಭವಿಗಳಿಗೆ 10 ಲಕ್ಷ ರೂ. ನಿಗದಿ ಮಾಡಬೇಕು. ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಎಸ್‌ಸಿಪಿ-ಟಿಎಸ್‌ಪಿ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಯ ಹಣವನ್ನು ಇತರೆ ಕಾಮಗಾರಿಗಳಿಗೆ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ಎಚ್.ಪಿ.ಜವರಯ್ಯ, ಎಂ.ನಾಗರಾಜಯ್ಯ, ಎಂ.ಎ.ಶೋಭಾ, ಪವನ್, ಧರ್ಮಾತ್ಮ, ಯತೀಶ್, ಸೋಮರಾಜ್, ಎಂ.ಸುದರ್ಶನ್, ಗುಡಿಗೆರೆ ಬಸವರಾಜ್, ನೀಲಯ್ಯ ಇತರರಿದ್ದರು.