ಜಿಲ್ಲೆ

ಸದಾಶಿವ ಆಯೋಗದ ವರದಿ ಅಂಗೀಕರಿಸಲು ಆಗ್ರಹ: ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

reportermys

ಮಂಡ್ಯ: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ ಸಲ್ಲಿಸಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಇದರೊಟ್ಟಿಗೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆಗೆ ಅನ್ವಯವಾಗುವಂತೆ ತಿದ್ದುಪಡಿ ಮಾಡಬೇಕು. ಪರಿಶಿಷ್ಟ ಜಾತಿ, ವರ್ಗಗಳ ಅಭಿವೃದ್ಧಿಗಾಗಿ ಎಸ್‌ಸಿಪಿ/ಟಿಎಸ್ಪಿ ಯೋಜನೆಯಲ್ಲಿ ಮೀಸಲಿಟ್ಟ ಹಣವನ್ನು ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸುತ್ತಿರುವುದು ಖಂಡನೀಯ. ಈ ಹಣವನ್ನು ವಾಪಸ್ ಪಡೆಯಲು ಸರ್ಕಾರ ರಚಿಸಿಕೊಂಡಿರುವ 7(ಡಿ) ಕಾಯ್ದೆಯನ್ನು ಸರ್ಕಾರ ತಕ್ಷಣ ರದ್ದುಪಡಿಸಬೇಕು. ಪರಿಶಿಷ್ಟ ಜಾತಿಯ 101 ಉಪ ಪಂಗಡಗಳ ಪಟ್ಟಿಯ ಕ್ರಮ ಸಂಖ್ಯೆ 19ರಲ್ಲಿ ಬೇಡ ಜಂಗಮ/ಬುಡಜಂಗಮ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಶಿಕ್ಷಣ, ಉದ್ಯೋಗ ಮತ್ತಿತರ ಸೌಲಭ್ಯ ಪಡೆದಿರುವವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಸುಳ್ಳು ಪ್ರಮಾಣಪತ್ರ ನೀಡುವ ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರಿ ನೌಕರರ ಹೊಸ ಪಿಂಚಣಿ ಯೋಜನೆ (ಎಸ್‌ಎಸ್‌ಪಿ)ರದ್ದುಪಡಿಸಿ, ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ (ಫಾರ್ಮ್ ನಂ. 50, 53 ಮತ್ತು 57ರಡಿ ಅರ್ಜಿ ಸಲ್ಲಿಸಿರುವ) ಸಾಗುವಳಿ ಚೀಟಿ ನೀಡಬೇಕು. ಸರ್ಕಾರಿ ಭೂಮಿಯಲ್ಲಿ ವಾಸಿಸುವ ಬಡವರಿಗೆ ಹಕ್ಕುಪತ್ರ ನೀಡಬೇಕು. ನಿವೇಶನ ರಹಿತ ಎಲ್ಲ ಬಡವರಿಗೆ ವಾಸಕ್ಕೆ ಯೋಗ್ಯವಾದ ಭೂಮಿ ಖರೀದಿಸಿ (ನಿವಶನಗಳಾಗಿ ಪರಿವರ್ತನೆ ಮಾಡಿ) ನಿವೇಶನ ಹಕ್ಕುಪತ್ರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಶಿವರಾಜ್ ಮರಳಿಗ, ಮುಖಂಡರಾದ ಶ್ರೆನಿವಾಸ, ಗುರುಲಿಂಗಯ್ಯ, ಸುನಿಲ್ ಕುಮಾರ್, ಶಂಕರ್ ನಿಡಘಟ್ಟ, ಗಂಗಾಧರ್ ಇತರರಿದ್ದರು.