ಜಿಲ್ಲೆ

ನಕಲಿ ಪ್ರಮಾಣ ಪತ್ರ ಕೊಟ್ಟವರು, ಪಡೆದುಕೊಂಡ ಇಬ್ಬರಿಗೂ ಶಿಕ್ಷೆಯಾಗಲಿ: ನಗರದಲ್ಲಿ ಡಿಎಸ್ಎಸ್ ಪ್ರತಿಭಟನೆ

reportermys

ಮಂಡ್ಯ: ವೀರಶೈವ ಲಿಂಗಾಯತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಪ.ಜಾತಿ/ಪಂಗಡದ ಹೆಸರಿನಲ್ಲಿ ಈಗಾಗಲೇ ರಾಜ್ಯದಲ್ಲಿ ೧.೫ ಲಕ್ಷಕ್ಕೂ ಹೆಚ್ಚು ಜನ ನಕಲಿ ಬೇಡ ಜಂಗಮರ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಸರ್ಕಾರಿ ನೌಕರಿ ಮತ್ತು ಸೌಲಭ್ಯಗಳನ್ನು ಪಡೆದಿದ್ದಾರೆ. ಅನೇಕ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ವಿವಿಧ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಪಡೆದಿದ್ದಾರೆ. ಆದ್ದರಿಂದ ಇಂತಹ ಸುಳ್ಳು ಜಾತಿ ಪ್ರಮಾಣ ಪತ್ರಗಳ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಪ್ರತಿ ಜಿಲ್ಲೆಯಲ್ಲೂ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಈಗಾಗಲೇ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಶಿಕ್ಷಣ ಮತ್ತು ಉದ್ಯೋಗ ಮತ್ತಿತರ ಸೌಲಭ್ಯಗಳನ್ನು ಪಡೆದಿರುವವರನ್ನು ಶಿಕ್ಷೆಗೆ ಗುರಿಪಡಿಸಬೇಕು. ಅದೇ ರೀತಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ವಿರುದ್ಧ ಪ.ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ-೧೯೮೯ರ ರೀತ್ಯಾ ಕೇಸು ದಾಖಲಿಸಿ ಜೈಲಿಗೆ ಕಳುಹಿಸಬೇಕು. ಇದುವರೆಗೂ ದಲಿತ ಹೋರಾಟಗಾರರ ಮೇಲೆ ಪೊಲೀಸರು ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ರದ್ದುಪಡಿಸಬೇಕೆಂದ ಆಗ್ರಹಿಸಿದರು.