ಮಂಡ್ಯ: ಕಾವೇರಿ ನೀರನ್ನು ನಾಲೆಗಳಿಗೆ ಹರಿಸುವುದರ ಜತೆಗೆ ರೈತರಿಗೆ ಬರ ಪರಿಹಾರ ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸರ್‌ಎಂವಿ ಪ್ರತಿಮೆ ಎದುರಿನಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಪತ್ರ ರವಾನಿಸಿದರು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಷ್ಟ್ರೀಯ ಜಲ ನೀತಿ ಇಲ್ಲದಿದ್ದರೂ ಸಹ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಮೂಲಕ ರಾಜ್ಯ ಸರ್ಕಾರ ಜನರ ಮತ್ತು ಜಾನುವಾರುಗಳ ಹಿತ ಬಲಿ ಕೊಟ್ಟಿದೆ. ಜಲಾಶಯಗಳಲ್ಲಿದ್ದ ನೀರು ನೆರೆ ರಾಜ್ಯಕ್ಕೆ ಹರಿದ ಪರಿಣಾಮ ಇಲ್ಲಿನ ರೈತರು ಬೆಳೆ ಹಾಕದ ಪರಿಸ್ಥಿತಿ ನಿರ್ಮಾಣವಾಯಿತು. ಜಮೀನಿನಲ್ಲಿರುವ ಬೆಳೆ ಬಿರು ಬಿಸಿಲಿಗೆ ಒಣಗಿ ತರಗಾಗುತ್ತಿದೆ. ಕೆರೆ ಕಟ್ಟೆಗಳಲ್ಲಿ ನೀರು ಇಲ್ಲದೆ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಆದರೂ ಸಹ ರಾಜ್ಯ ಸರ್ಕಾರ ಚುನಾವಣೆಯಲ್ಲಿ ಬಿಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ, ಕೃಷ್ಣ, ಭೀಮಾ ನದಿ ಕರ್ನಾಟಕ ಸುತ್ತುವರೆದಿದ್ದರೂ ಸಹ ನೆರೆ ರಾಜ್ಯಗಳೊಂದಿಗೆ ಉಂಟಾಗಿರುವ ಜಲ ವಿವಾದಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಚುನಾಯಿತ ಜನಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕಾನೂನು ಹೋರಾಟದಲ್ಲಿ ಸಂಪೂರ್ಣ ವೈಫಲ್ಯತೆ ಕಂಡಿದೆ. ಇದರಿಂದ ಕರ್ನಾಟಕದ ನೀರಿನ ಪಾಲು ಮರೀಚಿಕೆಯಾಗಿದೆ. ಭೀಕರ ಬರಗಾಲದಿಂದ ಪರಿಸ್ಥಿತಿ ದಿನದಿಂದ ದಿನಕ್ಕೆ ಉಲ್ಭಣಿಸುತ್ತಿದ್ದು, ರೈತರ ಮತ್ತು ಜನ ಜಾನುವಾರಗಳ ಪರಿಸ್ಥಿತಿ ಬಿಗಡಾಯಿಸಿದೆ. ಆದರೂ ಸಹ ರಾಜ್ಯ ಸರ್ಕಾರ ನಯಾ ಪೈಸೆ ಪರಿಹಾರ ನೀಡಿಲ್ಲ. ಕಾವೇರಿ, ಕೃಷ್ಣ, ಭೀಮಾ ಹಾಗೂ ಹೇಮಾವತಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಬೇಕು. ಬೆಳೆದು ನಿಂತಿರುವ ಬೆಳೆ ರಕ್ಷಣೆಗೆ ಮುಂದಾಗಬೇಕು. ಜನ ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸಬೇಕು. ರೈತರು, ಕೃಷಿ ಕಾರ್ಮಿಕರಿಗೆ ತಲಾ ಐವತ್ತು ಸಾವಿರ ರೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಅನಿಲ್ಕುಮಾರ್ ಕೆರಗೋಡು, ಕೆ.ಎಂ.ಶ್ರೀನಿವಾಸ್, ಎಸ್.ಕುಮಾರ, ಸೋಮಶೇಖರ್, ಭಾಗ್ಯಮ್ಮ, ಗೀತಾ, ಸುಕನ್ಯಾ, ಸುರೇಶ್‌ಕುಮಾರ್, ಬಿ.ಆನಂದ, ಬಸವರಾಜ್, ಬಲರಾಮ ಇದ್ದರು.