ತಿ.ನರಸೀಪುರ: ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಹೇಳಿದರು.
ಬಾನು ಮುಷ್ತಾಕ್ ಬುಕರ್ ಪ್ರಶಸ್ತಿ ಪಡೆದಿರುವುದು ನಾಡಿಗೆ ಹೆಮ್ಮೆ ತರುವಂತದ್ದು, ಅಂತಹ ಸಾಹಿತಿಯನ್ನು ನಾಡಹಬ್ಬ ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಸರಿಯಾಗಿದೆ. ಕೋಮು ದ್ವೇಷವನ್ನು ಹರಡುತ್ತಾ, ಶಾಂತಿ ಸೌಹಾರ್ದತೆಯನ್ನು ಕದಡುತ್ತಾ ಏಕ ಸಂಸ್ಕೃತಿಯನ್ನು ಪ್ರತಿಪಾದಿಸುವ ಮತಾಂಧ ಶಕ್ತಿಗಳು ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿರುವುದು ಖಂಡನೀಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಬಗ್ಗೆ ಅಪಸ್ವರ ಎತ್ತದೆ, ನಮ್ಮ ನಾಡ ಹಬ್ಬವನ್ನು ಬಹಳ ವೈಭವ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಮುಖಾಂತರ ಇಡೀ ದೇಶಕ್ಕೆ ಒಂದು ಮಾದರಿಯಾಗಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮನವಿ ಮಾಡಿಕೊಳ್ಳುತ್ತದೆ. ದಸರಾ ಉದ್ಘಾಟಕರಾದ ಬಾನು ಮುಷ್ತಾಕ್ ಅವರಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.
ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬನ್ನಳ್ಳಿ ಸೋಮಣ್ಣ ಮಾತನಾಡಿ, ದಸರಾ ಉದ್ಘಾಟಕರಾದ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರನ್ನು ವಿರೋಧಿಸುವ ಕೋಮು ಶಕ್ತಿಗಳನ್ನು ದಸರಾ ಮುಗಿಯುವವರೆಗೆ ನಗರದಿಂದಲೇ ಗಡಿಪಾರು ಮಾಡಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ವಾಟಾಳ್ ನಾಗರಾಜು, ಬೊಮ್ಮನಹಳ್ಳಿ ಕುಮಾರ್ ಇದ್ದರು.