ಕಲಬುರಗಿ: ಶಾಂತಿಯುತ, ಸೌಹಾರ್ದದ ನೆಲವಾಗಿರುವ ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಕೇಸರಿ ಧ್ವಜ ಕೆಳಗಿಳಿಸಿದ್ದಾರೆ ಎಂಬ ನೆಪದಲ್ಲಿ ಗಲಭೆ ಸೃಷ್ಟಿಸಿ, ಕೇಸರಿಕರಣಗೊಳಿಸಲು ಬಿಜೆಪಿ, ಆರ್‌ಎಸ್‌ಎಸ್ ಯತ್ನಿಸುತ್ತಿರುವುದನ್ನು ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಖಂಡಿಸಿದರು.
ಅನುಮತಿ ಇಲ್ಲದೆ ಕೇಸರಿ ಧ್ವಜ ಹಾರಿಸಿದ್ದನ್ನು ಸ್ಥಳೀಯ ಆಡಳಿತ ಮಂಡಳಿಯವರು ಕೆಳಗಿಳಿಸಿ, ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಆದರೆ ಬಿಜೆಪಿಯ ಸಿ.ಟಿ.ರವಿ ರಾಷ್ಟç ಧ್ವಜನವನ್ನು ತಾಲಿಬಾನ್ ಧ್ವಜ ಎಂದು ಅವಮಾನಿಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
ತ್ರಿವರ್ಣ ಧ್ವಜಕ್ಕೆ ಗೌರವ ನೀಡಲ್ಲ, ಮೂರು ಎಂಬುದೇ ಅಪಶಕುನ ಎಂದು ಆರ್‌ಎಸ್‌ಎಸ್‌ನ ಮುಖವಾಣಿ `ದಿ ಆರ್ಗನೈಸರ್ ಪತ್ರಿಕೆಯಲ್ಲಿ ಹಿಂದೆಯೇ ಬರೆಯಲಾಗಿತ್ತು. ಇದೀಗ ಅದರ ವಿರುದ್ಧ ಮಾತನಾಡಿ, ಅಶಾಂತಿ ಮೂಡಿಸುತ್ತಿದ್ದಾರೆ. ರಾಮ ಮಂದಿರ ನಿರ್ಮಿಸಿ, ಮೋದಿಗೆ ಪರ್ಯಾವೇ ಇಲ್ಲ ಎನ್ನುವಂತೆ ಅಭಿಪ್ರಾಯ ಮೂಡಿಸಲಾಗುತ್ತಿದೆ. ಹಣ ಬಲದಿಂದ ಪ್ರತಿ ಪಕ್ಷಗಳನ್ನು ಕಟ್ಟಿ ಹಾಕುತ್ತಿದೆ. ಆಡಳಿತದಲ್ಲಿ ಧಾರ್ಮಿಕ ವಿಚಾರ ತುಂಬಿ, ಸುಳ್ಳು ರಾಷ್ಟçವಾದದ ಮೂಲಕ ಪ್ರಚೋದನೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಮ ಮಂದಿರ ಉದ್ಘಾಟನೆ, ವಾರಣಾಸಿ ಜ್ಞಾನವ್ಯಾಪಿ ಮಸೀದಿ, ಮಣಿಪುರದಲ್ಲಿ ಯೋಧನ ಪತ್ನಿಯ ಬೆತ್ತಲೆ ಮರವಣಿಗೆ, ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ಘಟನೆ ಸೇರಿ ದೇಶದಲ್ಲಿ ಕೋಮುದ್ವೇಷ ಬಿತ್ತುವ ಯತ್ನಗಳು ನಡೆಯುತ್ತಿವೆ. ದೇಶದಲ್ಲಿ ನಾಲ್ಕು ಕೋಟಿ ಜನರು ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿದ್ದಾರೆ. ೧೫ ವರ್ಷದಲ್ಲಿ ೧.೭೫ ಲಕ್ಷ ಸರ್ಕಾರಿ ಶಾಲೆ ಮುಚ್ಚಿವೆ. ಐದು ವರ್ಷದಲ್ಲಿ ಶೇ.೫೦ ಉದ್ದಿಮೆ ಸ್ಥಗಿತಗೊಂಡಿವೆ. ಯುವಕರಿಗೆ ಉದ್ಯೋಗವಿಲ್ಲ. ಅಪೌಷ್ಟಿಕತೆ ತಾಂಡವವಾಡುತ್ತಿದೆ. ಎಲ್ಲವನ್ನು ಬಿಟ್ಟು ಕೋಮು ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಮಿತಿಯ ಮಲ್ಲಿಕಾರ್ಜುನ ಕ್ರಾಂತಿ, ಮಹಾಂತೇಶ ಬಡದಾಳ, ಪ್ರೊ.ಮಾನು ಗುರಿಕಾರ, ಸೂರ್ಯಕಾಂತ ಆಜಾದಪುರ ಹಾಗೂ ಕಪಿಲ್ ಸಿಂಗೆ ಇತರರಿದ್ದರು.