ಮೈಸೂರು: ನ್ಯಾಯಮೂರ್ತಿ ಕಾಂತರಾಜು ಆಯೋಗದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷಾ ವರದಿ ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಆಗ್ರಹಿಸಿದರು.
ರಾಜ್ಯದಲ್ಲಿ ಹಲವಾರು ಜಾತಿಗಳು ಮೂಲಭೂತ ಹಕ್ಕು ಹಾಗೂ ಅವಕಾಶಗಳಿಂದ ವಂಚಿತವಾಗಿವೆ. ಅವಕಾಶ ವಂಚಿತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕಾಲಕಾಲಕ್ಕೆ ಆಯೋಗಗಳನ್ನು ರಚಿಸಿ ವರದಿ ಪಡೆಯಲಾಗುತ್ತಿದೆ. ಇದೇ ರೀತಿ ಕಾಂತರಾಜ ಆಯೋಗ ರಚಿಸಿ ವರದಿ ಪಡೆಯಲಾಗಿದೆ. ಆದರೆ, ವರದಿ ಬಿಡುಗಡೆಗೆ ವಿಳಂಬ ತೋರುತ್ತಿರುವುದು ಸರಿಯಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ವರದಿ ಬಿಡುಗಡೆ ಮಾಡಬಾರದು ಎಂದು ಕೆಲವರು ಒತ್ತಾಯಿಸುತ್ತಿರುವುದು ಸರಿಯಲ್ಲ. ವರದಿ ಬಿಡುಗಡೆ ಮಾಡದೆ ಇದ್ದರೆ ದಸಂಸದಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ದಸಂಸ ಪ್ರಮುಖರಾದ ಕೆ.ವಿ. ದೇವೇಂದ್ರ, ಕಿರಂಗೂರು ಸ್ವಾಮಿ, ಶಿವಮೂರ್ತಿ ಶಂಕರಪುರ ಹಾಗೂ ಇತರರು ಇದ್ದರು.