ಜಿಲ್ಲೆ

ವಸತಿ ಶಾಲೆ ಸ್ಥಳಾಂತರಕ್ಕೆ ಡಿಎಸ್‌ಎಸ್ ವಿರೋಧ

ವೀರೇಶ ಸೌದ್ರಿ

ಮುಂಡರಗಿ: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯನ್ನು ಶಾಸಕ ಡಾ. ಚಂದ್ರು ಲಮಾಣಿ ಅವರು ಲಕ್ಷ್ಮೇಶ್ವರಕ್ಕೆ ಸ್ಥಳಾಂತರಿಸಲು ಮುಂದಾಗಿದ್ದು ಖಂಡನೀಯ. ಯಾವುದೇ ಕಾರಣಕ್ಕೂ ಶಾಲೆಯನ್ನು ಸ್ಥಳಾಂತರಿಸಬಾರದು ಎಂದು ತಾಲೂಕು ಡಿ.ಎಸ್.ಎಸ್.(ಅಂಬೇಡ್ಕರ್ ವಾದ) ಸಂಚಾಲಕ ಎಚ್.ಡಿ. ಪೂಜಾರ ಒತ್ತಾಯಿಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ಶಾಲೆಯು ಉತ್ತಮ ಪ್ರತಿಶತದೊಂದಿಗೆ ಕಾರ್ಯನಿರ್ವಹಿಸುತ್ತಿದೆ. 6 ರಿಂದ 10ನೇ ತರಗತಿವರೆಗೆ ಒಟ್ಟು 239 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ತಾಲೂಕಿನ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಎಂದರು.

ವಸತಿ ಶಾಲೆಯು ತಾಲೂಕಿಗೆ ಬರುವುದಕ್ಕೆ ಸಾಕಷ್ಟು ಹೋರಾಟ ಮಾಡಲಾಗಿತ್ತು. ಬಾಡಿಗೆ ಕಟ್ಟಡದಲ್ಲಿದ್ದರೂ ಉತ್ತಮ ರೀತಿ ನಡೆಯುತ್ತಿದೆ. ವಸತಿ ಶಾಲೆಗಾಗಿ ಬೂದಿಹಾಳ ಸಮೀಪ 13ಎಕರೆ ಭೂಮಿ ಖರೀದಿಸಿದ್ದು ಅಲ್ಲಿ ಸ್ವಂತಕಟ್ಟಡ ನಿರ್ಮಿಸುವುದನ್ನು ಬಿಟ್ಟು, ಸ್ಥಳಾಂತರಿಸುವ ಕಾರ್ಯಕ್ಕೆ ಮುಂದಾಗುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.

ಸ್ಥಳಾಂತರಕ್ಕೆ ಮುಂದಾದರೆ ಧರಣಿ ಸತ್ಯಾಗ್ರಹ ನಡೆಸಸಲಾಗುವುದು. ಬೆಂಗಳೂರು ಚಲೋ ಪ್ರತಿಭಟನೆ ಕೈಗೊಂಡು ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ, ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿ.ಜಿ. ಪೂಜಾರ, ನಿಂಗರಾಜ ಹಾಲಿನವರ, ಮಹೇಶ ಹಾಲಿನವರ ಇದ್ದರು.