ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಿ.ಜಿ. ಸಾಗರ ಸುದ್ದಿಗೋಷ್ಠಿ ನಡೆಸಿದರು. ಸಿದ್ದು ರಾಯಣ್ಣವರ, ವೈ.ಸಿ. ಮಯೂರ, ರಮೇಶ ದರಣಾಕರ ಮತ್ತಿತರರಿದ್ದಾರೆ.  
ಜಿಲ್ಲೆ

ಸಿಎಂ ಸಿದ್ದರಾಮಯ್ಯ ಪರ ಡಿಎಸ್‌ಎಸ್ ಹೋರಾಟ; ರಾಜ್ಯ ಸಂಚಾಲಕ ಡಿ.ಜಿ. ಸಾಗರ ಹೇಳಿದ್ದೇನು ಗೊತ್ತಾ?

ವಿಜಯಪುರ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ಬಿಜೆಪಿ-ಜೆಡಿಎಸ್ ನಡೆ ಖಂಡಿಸಿ ಮತ್ತು ಅಹಿಂದ ಪರ ನಾಯಕ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಬೆಂಬಲಿಸಿ ಆ. 29 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಿ.ಜಿ. ಸಾಗರ ಹೇಳಿದರು.

ಸಿಎಂ ಸಿದ್ದರಾಮಯ್ಯ ಹಿಂದುಳಿದ ನಾಯಕರೆಂಬ ಕಾರಣಕ್ಕಾಗಿ, ನಿಷ್ಕಳಂಕ ರಾಜಕಾರಣಿ ಎಂಬ ಕಾರಣಕ್ಕಾಗಿ, ಸಂವಿಧಾನ ಪರ ನಾಯಕನೆಂಬ ಕಾರಣಕ್ಕಾಗಿ ಬಿಜೆಪಿ-ಜೆಡಿಎಸ್ ಕುತಂತ್ರದ ಮೂಲಕ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರ ನಡೆಸಿವೆ. ಸಿದ್ದರಾಮಯ್ಯ ಅವರು ಯಾವುದೇ ಹಗರಣ ಮಾಡಿಲ್ಲ. ಅವರೊಬ್ಬ ಪ್ರಾಮಾಣಿಕ, ಸೈದ್ಧಾಂತಿಕ ರಾಜಕಾರಣಿ. ಹೀಗಾಗಿ ಅವರ ಬೆನ್ನಿಗೆ ದಲಿತ ಸಂಘರ್ಷ ಸಮಿತಿ ನಿಲ್ಲಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಬಿಜೆಪಿ ಮತ್ತು ಜೆಡಿಎಸ್ ಎಸ್‌ಸಿ-ಎಸ್‌ಟಿ, ಹಿಂದುಳಿದ ಸಮುದಾಯಗಳ ವಿರೋಧಿಯಾಗಿವೆ. ಸಂವಿಧಾನ ವಿರೋಧಿ ಪಕ್ಷಗಳು. ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ’ ಘೋಷ ವಾಕ್ಯದಡಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಿಜೆಪಿಯೇತರ ಸರ್ಕಾರದ ಜನರಿಂದ ಆಯ್ಕೆಯಾಗಿದ್ದ ಬಹುಮತದ ಸರ್ಕಾರಗಳನ್ನು ಕೆಡವುತ್ತಾ ಬರುತ್ತಿವೆ. ಈಗ ಜನರಿಂದ ಆಯ್ಕೆಯಾದ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರವನ್ನು ಇಟ್ಟುಕೊಂಡು ತನ್ನ ಚಾಳಿಯನ್ನು ಪ್ರಾರಂಭಗೊಳಿಸುತ್ತಿದೆ. ಮುಡಾ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ಪ್ರಾಸಿಕ್ಯುಷನ್‌ಗೆ ಅನುಮತಿ ನೀಡಿರುವುದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ರಾಜ್ಯ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ ಎಂದರು.

ಮನುವಾದಿ ಪರ ಪಕ್ಷವಾದ ಬಿಜೆಪಿ-ಜೆಡಿಎಸ್ ದ್ವೇಷ ರಾಜಕಾರಣ ಮುಂದುವರಿಸಿವೆ. ರಾಜಭವನವನ್ನು ಹಾಗೂ ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿವೆ. ರಾಜ್ಯಪಾಲರು ಮುಡಾ ಪ್ರಕರಣದಲ್ಲಿ ಸಂವಿಧಾನ ಬಾಹಿರವಾಗಿ ವರ್ತಿಸಿದ್ದಾರೆ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನರೆಡ್ಡಿಯವರ ವಿರುದ್ಧ ದೂರು ನೀಡಲಾಗಿದ್ದರೂ ಈವರೆಗೆ ಯಾವುದೇ ಕ್ರಮವಾಗಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ದೂರು ಬಂದ ತಕ್ಷಣವೇ ವಿಚಾರಣೆಗೆ ಅನುಮತಿ ನೀಡಿರುವುದು ಯಾವ ನ್ಯಾಯ? ರಾಜ್ಯಪಾಲರ ಭವನ ಕೇಂದ್ರ ಬಿಜೆಪಿ ಸರ್ಕಾರದ ಅಡ್ಡೆಯಾಗಿದೆ ಎಂದು ಟೀಕಿಸಿದರು.

ಆರ್‌ಎಸ್‌ಎಸ್, ಬಿಜೆಪಿ ಮತ್ತು ಜೆಡಿಎಸ್ ಜೊತೆಯಾಗಿ ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಮಾಡುತ್ತಿವೆ. ಹಿಂದುಳಿದ ವರ್ಗಗಳ ನಾಯಕನೊಬ್ಬ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡುತ್ತಿರುವುದು ಸಹಿಸಿಕೊಳ್ಳಲು ಸಾಧ್ಯವಾಗದೆ ಇಂತಹ ಕೆಳಮಟ್ಟದ ಕೆಲಸಕ್ಕೆ ಇಳಿದಿದ್ದಾರೆ. ಇಂಥ ಸಂದರ್ಭದಲ್ಲಿ ಸಿದ್ದರಾಮಯ್ಯ ಪರವಾಗಿ ದಲಿತ ಸಂಘರ್ಷ ಸಮಿತಿ ನಿಲುವುದು ಅನಿವಾರ್ಯ ಮತ್ತು ಅಗತ್ಯವೂ ಆಗಿದೆ ಎಂದು ಡಿ.ಜೆ. ಸಾಗರ ಹರಿಹಾಯ್ದರು.
ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ, ವೈ.ಸಿ. ಮಯೂರ, ರಮೇಶ ದರಣಾಕರ, ಎಸ್.ಪಿ. ಸುಳ್ಳದ ಮತ್ತಿತರರಿದ್ದರು.