ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಡಿಎಸ್‌ಎಸ್ ಕಾರ್ಯಕರ್ತರು ಒಕ್ಕಲಿಗರ ಹಾಗೂ ದಲಿತ ಸಮುದಾಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಮುನಿರತ್ನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಾಲಕೃಷ್ಣ ಬಿಳೇಕಲ್ಲು, ಯೋಗೇಶ್, ಬಾಬಣ್ಣ, ಪ್ರಸನ್ನ ಕುಮಾರ್, ಗಿರೀಶ್, ಸಿದ್ದಯ್ಯ, ವಸಂತ್ ಮತ್ತಿತರರಿದ್ದರು. 
ಜಿಲ್ಲೆ

ಮುನಿರತ್ನ ವಿರುದ್ಧ ಕಠಿಣ ಕ್ರಮಕ್ಕೆ ಡಿಎಸ್‌ಎಸ್ ಆಗ್ರಹ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ಒಕ್ಕಲಿಗರ ಹಾಗೂ ದಲಿತ ಸಮುದಾಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಮುನಿರತ್ನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಡಿಎಸ್‌ಎಸ್ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು, ಜಾತಿ ನಿಂದನೆ, ಜೀವ ಬೆದರಿಕೆ ಹಾಗೂ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿರುವ ಶಾಸಕ ಮುನಿರತ್ನ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಮುನಿರತ್ನ ಸೆರೆವಾಸದಲ್ಲಿದ್ದು, ಅವರ ಮೇಲಿರುವ ಆರೋಪಗಳು ತೀರಾ ಗಂಭೀರ ಸ್ವರೂಪದವುಗಳಾಗಿವೆ. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ರಚಿಸಿರುವುದು ಸ್ವಾಗತಾರ್ಹ. ಜೊತೆಗೆ ಎಸ್‌ಐಟಿ ಜೊತೆಗೂಡಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ರಾಮನಗರ ಜಿಲ್ಲೆಯ ವ್ಯಾಪ್ತಿಯ ಕಗ್ಗಲಪುರ ಪೊಲೀಸ್ ಠಾಣೆಯಲ್ಲಿ ಮಹಿಳೆ ನೀಡಿದ ದೂರಿದನ್ವಯ ಪ್ರಕರಣದಲ್ಲಿ ಭಾಗಿಯಾದ ಸಹಚರರ ಮೇಲೆ ಕೇಸು ದಾಖಲಿಸಿ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದರು.
ಕೇAದ್ರ ಸರ್ಕಾರ ಒಂದು ದೇಶ, ಒಂದು ಚುನಾವಣೆಯ ಜಾರಿಗೆ ತರಲು ನಿರ್ಧರಿಸಿರುವುದನ್ನು ಕೂಡಲೇ ವಾಪಸ್ ಪಡೆಯಬೇಕು. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಅನಿಷ್ಟಾನಗೊಳಿಸಬಾರದು. ಒಂದು ದೇಶ, ಒಂದು ಚುನಾವಣೆಯ ವ್ಯವಸ್ಥೆ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಲೋಕಸಭೆ ಇಲ್ಲವೇ ವಿಧಾನಸಭೆಯಲ್ಲಿ ಆಡಳಿತರೂಢ ಪಕ್ಷ ವಿಶ್ವಾಸ ಮತಗಳಿಸಲು ಸೋತರೆ ಎದುರಾಗುವ ಬಿಕ್ಕಟ್ಟಿಗೆ ಪ್ರಸ್ತಾಪದಲ್ಲಿ ಪರಿಹಾರವಿಲ್ಲ ಎಂದರು.
ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಯೋಗೇಶ್, ಖಜಾಂಚಿ ಬಾಬಣ್ಣ, ನಗರ ಸಂಚಾಲಕ ಪ್ರಸನ್ನಕುಮಾರ್, ಸಹ ಸಂಚಾಲಕ ಗಿರೀಶ್, ಮುಖಂಡರಾದ ಸಿದ್ದಯ್ಯ, ವಸಂತ್, ರುಕ್ಷೀಣ, ಪವಿತ್ರ, ಆರ್.ಶೇಖರ್ ಮತ್ತಿತರರಿದ್ದರು.