ಚಿಕ್ಕಬಳ್ಳಾಪುರ: ತಾಲೂಕಿನ ಮರಳುಕುಂಟೆಯಲ್ಲಿನ ರೈತ ನಾರಾಯಣಸ್ವಾಮಿಯ ಡ್ರ್ಯಾಗನ್ ಹಣ್ಣು ತೋಟಕ್ಕೆ ಬುಧವಾರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. ಅಭಿಲಕ್ಷ ಲಿಖಿ ಭೇಟಿ ನೀಡಿ, ಪರಿಶೀಲಿಸಿದರು.
ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ, ಕೃಷಿಗೆ ಹೆಸರುವಾಸಿಯಾಗಿರುವ ಜಿಲ್ಲೆಯಲ್ಲಿ ಇತ್ತೀಚೆಗೆ ಡ್ರ್ಯಾಗನ್ ಹಣ್ಣು ಬೆಳೆಯುವಲ್ಲಿ ರೈತರು ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ಉತ್ತಮ ಇಳುವರಿ ಪಡೆಯುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ.ಅಭಿಲಕ್ಷ ಲಿಖಿ ನೇತೃತ್ವದ ತಂಡವು ಪ್ರಗತಿಪರ ರೈತನ ಡ್ರ್ಯಾಗನ್ ಹಣ್ಣು, ಸೇಬು, ಲಾಂಗಾವ್, ದಾಳಿಂಬೆ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಮೊದಲಿನಿಂದಲೂ ಕೊಳವೆ ಬಾವಿ ವೈಫಲ್ಯ, ಅಂತರ್ಜಲ ಮಟ್ಟ ಕುಸಿತ ಸೇರಿದಂತೆ ನಾನಾ ಸಮಸ್ಯೆಗಳ ನಡುವೆಯೂ ರೇಷ್ಮೆ, ಹಾಲು ಉತ್ಪಾದನೆಯಲ್ಲಿ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯು ಮುಂಚೂಣಿಯಲ್ಲಿದೆ. ಈ ಹಿಂದೆ ಒಳ್ಳೆಯ ಬೆಳೆಗಳನ್ನು ಬೆಳೆದು ಆಥಿರ್ಕ ಪ್ರಗತಿಯನ್ನು ಸಾಧಿಸಿದ್ದು ನುರಿತ ತರ ಮಾರ್ಗದರ್ಶನವನ್ನು ಪಡೆದುಕೊಂಡು ಆಧುನಿಕ ತಂತ್ರಜ್ಞಾನವನ್ನು ಬಳಸಿ ಡ್ರ್ಯಾಗನ್ ಹಣ್ಣು ಬೆಳೆಯಲಾಗುತ್ತಿದೆ. ಉತ್ತಮ ಇಳುವರಿಯಿಂದ ಒಳ್ಳೆಯ ಆದಾಯ ಸಿಗುವ ನಿರೀಕ್ಷೆ ಇದೆ ಎಂದು ರೈತ ನಾರಾಯಣಸ್ವಾಮಿ ಸಂತಸ ವ್ಯಕ್ತಪಡಿಸಿದರು.
ಕೃಷಿಯ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚಿನ ಸವಲತ್ತುಗಳನ್ನು ಒದಗಿಸಬೇಕಾಗಿರುವುದು ಅಗತ್ಯವಿದೆ. ಪೋತ್ಸಾಹದಾಯಕ ಕ್ರಮಗಳಿಂದ ಅನ್ನದಾತ ರೈತರ ಕಲ್ಯಾಣಕ್ಕೆ ಶ್ರಮಿಸಬೇಕಾಗಿದೆ. ನೀರು, ವಿದ್ಯುತ್, ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ. ಇವುಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಕೆಲಸವಾಗಬೇಕಾಗಿದೆ ಎಂದು ರೈತರು ಮನವಿ ಮಾಡಿದರು.
ಇದೇ ವೇಳೆ ಪ್ರತಿಕ್ರಿಯಿಸಿದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. ಅಭಿಲಕ್ಷ ಲಿಖಿ, ಭಾರತದಲ್ಲಿ ಕಮಲಂ ಫೂಟ್ ಇಲ್ಲವೇ ಡ್ರ್ಯಾಗನ್ ಹಣ್ಣುಬೆಳೆಯುವವರ ಸಂಖ್ಯೆ ಸೀಮಿತವಾಗಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಛತ್ತೀಸ್ಗಢ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಮಿಜೋರಾಂ ಮತ್ತು ನಾಗಾಲ್ಯಾಂಡ್ ನಲ್ಲಿ ಹೆಚ್ಚಿಗೆ ಬೆಳೆಯಲಾಗುತ್ತಿದೆ. ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಅಭಿಯಾನದಡಿ ಡ್ರ್ಯಾಗನ್ ಹಣ್ಣು ಬೆಳೆಯುವ ಪ್ರದೇಶದ ವಿಸ್ತರಣಾ ಚಟುವಟಿಕೆಯನ್ನು ಕೈಗೆತ್ತಿಕೊಳ್ಳಲಾಗಿದೆ. ವಿವಿಧ ರಾಜ್ಯಗಳಲ್ಲಿ 4,133 ಹೆಕ್ಟೇರ್ ಪ್ರದೇಶಕ್ಕೆ ಈ ಬೆಳೆಯನ್ನು ವಿಸ್ತರಿಸುವ ಗುರಿ ಹೊಂದಿದ್ದು ಅನುಮೋದಿತ ಗುರಿ ಪ್ರದೇಶ ಕಾರ್ಯಕ್ರಮಗಳನ್ನು ಮಿಜೋರಾಂ, ನಾಗಾಲ್ಯಾಂಡ್, ಛತ್ತೀಸ್ಗಢ್, ಗುಜರಾತ್, ಕರ್ನಾಟಕ, ಅಸ್ಸಾಂ, ಆಂಧ್ರಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲಿ ಜಾರಿ ಮಾಡಲಾಗಿದೆ ಎಂದರು.
ಈಗಾಗಲೇ ಕಮಲಂ ನ ಮಹತ್ವವನ್ನು ಪರಿಗಣಿಸಿ, 5 ವರ್ಷದ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಮುಂದಿನ 5 ವರ್ಷಗಳಲ್ಲಿ ಕಮಲಂ ಫಲವನ್ನು ಆಮದು ಮಾಡಿಕೊಳ್ಳುವ ಬದಲು 4,000 ಹೆಕ್ಟೇರ್ನಿಂದ 50,000 ಹೆಕ್ಟೇರ್ಗೆ ವಿಸ್ತರಿಸಿ ಸ್ವಾವಲಂಬಿ ಭಾರತ ಅಭಿಯಾನದಡಿ ಪ್ರಮುಖ ಸಾಧನೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಬೆಂಗಳೂರಿನ ಲಾಲಾಬಾಗ್ನ ಹೆಚ್ಚುವರಿ ನಿರ್ದೇಶಕ ಪರಶಿವಮೂತಿರ್, ಜಂಟಿ ನಿರ್ದೇಶಕ ಎನ್.ಪ್ರಸಾದ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಂ.ಗಾಯತ್ರಿ, ಹಿರಿಯ ಸಹಾಯಕ ನಿರ್ದೇಶಕಿ ಎ.ಗಾಯಿತ್ರಿ ಮತ್ತಿತರರು ಇದ್ದರು.