ಜಿಲ್ಲೆ

ಕುಡಿದ ಅಮಲಿನಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರುಪಾಲಾದ ಯುವಕ

ಚಿಕ್ಕಬಳ್ಳಾಪುರ: ಬರ್ತ್ ಡೇ ಪಾರ್ಟಿ ವೇಳೆ ಫೋಟೋ-ವಿಡಿಯೋ ಕ್ರೇಜ್​ಗೆ ಕುಡಿದ ಅಮಲಿನಲ್ಲಿ ಮರದ ಮೇಲೆ ಹತ್ತಿದ ಯುವಕನೊಬ್ಬ ಜಲಾಶಯದ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ಜಲಾಶಯದ ಹಿನ್ನೀರಿನಲ್ಲಿ ಈ ದುರಂತ ನಡೆದಿದೆ. ಬೆಂಗಳೂರಿನ ಸುಂಕದಕಟ್ಟೆ ನಿವಾಸಿಯಾಗಿದ್ದ ರೋಹಿತ್(24) ಮೃತ ದುರ್ದೈವಿ.

ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದ ರೋಹಿತ್​, ಅಕ್ಸೇಂಚರ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ. ತನ್ನ 5 ಜನ ಸ್ನೇಹಿತರೊಂದಿಗೆ ಬರ್ತ್ ಡೇ ಪಾರ್ಟಿ ಆಚರಣೆಗೆ ಜಕ್ಕಲಮಡಗು ಜಲಾಶಯ ಪ್ರದೇಶಕ್ಕೆ ಬಂದಿದ್ದ. ಈಜು ಬರದಿದ್ರೂ ನೀರಿಗೆ ಇಳಿದಿದ್ದ ಸ್ನೇಹಿತರು, ಜಲಾಶಯದ ಹಿನ್ನೀರಿನಲ್ಲಿರುವ ಮರದಲ್ಲಿ ಹತ್ತಿ ಸೆಲ್ಪಿ ಪೋಟೊ-ವಿಡಿಯೋ ಮಾಡಿಕೊಳ್ಳುತ್ತಿದ್ದರು. ಕುಡಿದ ಅಮಲಿನಲ್ಲಿ ಮರದ ಮೇಲೆ ಹತ್ತಿದ ರೋಹಿತ್ ಆಯತಪ್ಪಿ ನೀರಿಗೆ ಬಿದ್ದಿದ್ದ ಎಂದು ನಂದಿಗಿರಿಧಾಮ ಠಾಣೆ ಪೊಲೀಸರು ತಿಳಿಸಿದ್ದಾರೆ.

ನೀರಿನಲ್ಲಿ ಮುಳುಗಿ ಸಾವಪ್ಪಿದ ರೋಹಿತ್​ ಶವವನ್ನು ಅಗ್ನಿಶಾಮಕ ದಳದವರು ಶೋಧ ಕಾರ್ಯ ನಡೆಸಿ ದಡಕ್ಕೆ ತಂದಿದ್ದಾರೆ. ಸ್ಥಳದಲ್ಲಿ ಮೃತನ ಪಾಲಕರ ಆಕ್ರಂದನ ಮುಗಿಲುಮುಟ್ಟಿದ್ದು, ಜೊತೆಗಿದ್ದ ಸ್ನೇಹಿತರ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)