ಮಡಿಕೇರಿ: ಮದ್ಯ ಸೇವಿಸಿ ಕಾರು ಚಾಲನೆ ಮಾಡಿ ಆಟೋರಿಕ್ಷಕ್ಕೆ ಡಿಕ್ಕಿಹೊಡೆದ ಕಾರಿನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕು ತಿರುಮಲಪುರ ನಿವಾಸಿ ಆನಂದ(೪೦) ಬಂಧಿತ ಆರೋಪಿ.
ಕೂಡಿಗೆಯಿಂದ ಕುಶಾಲನಗರ ಕಡೆಗೆ ಹೋಗುವ ರಸ್ತೆಯಲ್ಲಿ ತನ್ನ ಹುಂಡೈ ಕ್ರೇಟಾ ಕಾರನ್ನು(ಕೆಎ೧೨ಎಂಕೆ ೨೮೬೪) ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿ. ಸನಾ ಎಕರೆ ಸೆಂಟರ್‌ನ ಮುಂದೆ ರಸ್ತೆಯ ಎಡ ಬದಿಯಲ್ಲಿ ನಿಂತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ್ದಾನೆ. ಈ ವೇಳೆ ಸ್ಥಳೀಯರು ಕಾರನ್ನು ತಡೆದು ನಿಲ್ಲಿಸಿದಾಗ ಕಾರು ಚಾಲಕ ಆನಂದ ಮದ್ಯಪಾನ ಮಾಡಿರುವುದು ಕಂಡುಬಂದಿದ್ದು, ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಗಾಯಗೊಂಡ ಆಟೋ ಚಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಕಲಂ ೨೮೧, ೧೧೦, ೩೫೨ ಬಿಎನ್‌ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಆನಂದನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.