ಜಿಲ್ಲೆ

ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ ಚಾಲಕನಿಂದ ಮುಖ್ಯಪೇದೆ ಮೇಲೆ ಹಲ್ಲೆ

ರಾಜಣ್ಣ

ಯಳಂದೂರು: ಪಟ್ಟಣದಲ್ಲಿ ಭಾನುವಾರ ಕುಡಿದ ಮತ್ತಿನಲ್ಲಿದ್ದ ಬಿಎಂಟಿಸಿ ಬಸ್ ಚಾಲಕನೊಬ್ಬ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿ ಗಾಯಗೊಳಿದ್ದಾನೆ.


ಪಟ್ಟಣ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನ್ಸರ್‌ಪಾಷ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ಭೀಮನ ಅಮಾವಾಸ್ಯೆ ನಿಮಿತ್ತ ಕರ್ತವ್ಯ ಮಾಡುತ್ತಿದ್ದ ಅನ್ಸರ್‌ಪಾಷ , ಕುಡಿದು ಬಸ್ ನಿಲ್ದಾಣದಲ್ಲಿ ಬೈಯುತ್ತಿದ್ದ ವ್ಯಕ್ತಿಗೆ ಬುದ್ಧಿವಾದ ಹೇಳುತ್ತಿದ್ದಾಗ ಆತ ಪೇದೆ ನಿಂದಿಸಲಾರಂಭಿಸಿದ, ನಂತರ ಸಮವಸ್ತ್ರಕ್ಕೆ ಕೈ ಹಾಕಿ ಕೊರಳುಪಟ್ಟಿ ಹಿಡಿದು ಎದೆಗೆ ಗುದ್ದಿ ನೋವು ಮಾಡಿದ್ದಾನೆ. ನಂತರ ಕಾಲಿನ ಚಪ್ಪಲಿಯನ್ನು ಕೈಯಲ್ಲಿ ಎತ್ತಿ ಹಿಡಿದು ಹಲ್ಲೆಗೆ ಮುಂದಾಗಿದ್ದಾನೆ. ಕರ್ತವ್ಯದಲ್ಲಿದ್ದ ಮತ್ತೊಬ್ಬ ಪೊಲೀಸ್ ಪೇದೆ ರಮೇಶ್ ಅವರು ಆತನನ್ನು ಹಿಡಿದು ವಿಚಾರಿಸಿದಾಗ ಆತ ಚಾಮರಾಜನಗರ ತಾಲೂಕಿನ ಜನ್ನೂರು-ಹೊಸೂರು ಗ್ರಾಮದ ಮಹದೇವಯ್ಯ ಎಂದು ತಿಳಿದು ಬಂದಿದ್ದು, ಆತ ಬಿಎಂಟಿಸಿ ಬಸ್ ಚಾಲಕನಾಗಿದ್ದಾನೆ ಎಂದು ಗೊತ್ತಾಗಿದೆ.


ಮಗುಚಿ ಬಿದ್ದ ಆಟೋ: ಮುಂದಿನ ಕ್ರಮಕ್ಕೆ ಆತನನ್ನು ಠಾಣೆಗೆ ಕರೆದೊಯ್ಯಲು ಆಟೋ ಹತ್ತಿಸಿದ್ದಾರೆ. ಆಟೋ ಹತ್ತಲು ಸತಾಯಿಸುತ್ತಿದ್ದ ಆತ ಪಟ್ಟಣದ ಟ್ರಾಫಿಕ್ ಸಿಗ್ನಲ್ ಬಳಿ ಬಂದು ಆಟೋ ಚಾಲಕನ ಕೈ ಹಿಡಿದು ಎಳೆದಿದ್ದಾನೆ. ಆಗ ಆಟೋ ಒಂದು ಕಡೆ ವಾಲಿ ಬಿದ್ದಿದೆ. ಈ ಸಂದರ್ಭದಲ್ಲಿ ಪೇದೆ ಅನ್ಸರ್‌ಪಾಷ ಬಲಗೈ ಹೆಬ್ಬರಳಿಗೆ ಗಾಯವಾಗಿದ್ದು ಮಹದೇವಯ್ಯನಿಗೂ ಗಾಯವಾಗಿದೆ. ಆತನಿಗೆ ಚಿಕಿತ್ಸೆ ಕೊಡಿಸಿ, ನಂತರ ಆತನ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.