ಶಿಬಂ ನಾಥ್​ ಹಾಗೂ ಪ್ರಿಯಾಂಕ್ ಸರ್ಕಾರ್  
ಜಿಲ್ಲೆ

ಪಾನಮತ್ತರಾಗಿ ಜಾಲಿರೈಡ್​ಗೆಂದು ಕಾರ್ ಕದ್ರು, ಆ್ಯಕ್ಸಿಡೆಂಟ್​ ಆಗಿ ಸಿಕ್ಕಿಬಿದ್ರು!

Webdesk - Ravikanth

ಬೆಂಗಳೂರು: ಒಬ್ಬ ಮಾಡುತ್ತಿದ್ದುದು ಸೆಕ್ಯುರಿಟಿ ಕೆಲಸ, ಇನ್ನೊಬ್ಬನಿಗೆ ಪಾರ್ಕಿಂಗ್​ ಲಾಟ್​ನಲ್ಲಿ ಕೆಲಸ. ಇಬ್ಬರೂ ಸೇರಿ ಜಾಲಿರೈಡ್​ಗೆಂದು ಕಾರು ಕದ್ದರು. ಆದರೆ ಕುಡಿದ ಮತ್ತಿನಲ್ಲಿ ಚಲಾಯಿಸಿದ್ದರಿಂದ ಕಾರು ಅಪಘಾತಕ್ಕೆ ಒಳಗಾಗಿ, ಕೊನೆಗೂ ಇಬ್ಬರೂ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.

ತ್ರಿಪುರ ಮೂಲದ ಪ್ರಿಯಾಂಕ್​ ಸರ್ಕಾರ್ ಹಾಗೂ ಶಿಬಂ ನಾಥ್​ ಆರೋಪಿಗಳು. ಇವರಿಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇಬ್ಬರೂ ಒಂದೇ ರೂಮ್​ನಲ್ಲಿ ವಾಸ ಮಾಡುತ್ತಿದ್ದಾರೆ. ಪ್ರಿಯಾಂಕ್ ಸರ್ಕಾರ್ ಹೈಗ್ರೌಂಡ್ಸ್ ಪೊಲೀಸ್​ ಠಾಣಾ ವ್ಯಾಪ್ತಿಯ ಅಪಾರ್ಟ್​ಮೆಂಟ್​ವೊಂದರಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ. ಶಿಬಂ ನಾಥ್​ ಮಂತ್ರಿ ಮಾಲ್ ಪಾರ್ಕಿಂಗ್ ಲಾಟ್​ನಲ್ಲಿ ಕೆಲಸ ಮಾಡುತ್ತಿದ್ದ.

ಪ್ರೇಮಿಗಳ ದಿನದ ಹಿಂದಿನ ದಿವಸ ಎಂದರೆ ಫೆ. 13ರ ಶನಿವಾರ ಅಪಾರ್ಟ್​ಮೆಂಟ್​ ಬಳಿ ಕುಡಿದು ಪಾರ್ಟಿ ಮಾಡಿದ್ದ ಇವರಿಬ್ಬರಿಗೆ ಜಾಲಿರೈಡ್​ಗೆ ಹೋಗುವ ಆಸೆಯಾಗಿತ್ತು. ಆಗ ಶಿಬಂ ತನ್ನ ಬಳಿ ಇರುವ ಕೀ ಬಂಚ್​ನಲ್ಲಿದ್ದ ಕಾರ್ ಕೀ ಮೂಲಕ ಪಾರ್ಕಿಂಗ್​ನಲ್ಲಿದ್ದ ಹೋಂಡಾ ಸಿಟಿ ಕಾರು ತೆಗೆದುಕೊಂಡಿದ್ದು, ಇಬ್ಬರೂ ರಾತ್ರಿ ಜಾಲಿರೈಡ್ ಹೋಗಿದ್ದರು.

ಆದರೆ ಇಬ್ಬರೂ ಕುಡಿದ ಮತ್ತಿನಲ್ಲಿದ್ದಿದ್ದರಿಂದ ಚಾಮರಾಜಪೇಟೆ 5ನೇ ಅಡ್ಡರಸ್ತೆ ಬಳಿ ಅಪಘಾತ ಉಂಟಾಗಿತ್ತು. ಇದರಿಂದ ಗಲಿಬಿಲಿಗೊಂಡ ಇವರಿಬ್ಬರು ಕಾರನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿ ತೆರಳಿದ್ದರು. ಅತ್ತ ಕಾರು ಕಾಣಿಸದ ಕಾರಣ ಕಾರ್ ಮಾಲೀಕ ರವಿಕುಮಾರ್ ಹೈಗ್ರೌಂಡ್ಸ್​ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪೊಲೀಸರು ಸೆಕ್ಯುರಿಟಿ ಗಾರ್ಡ್ ಪ್ರಿಯಾಂಕ್​ನನ್ನು ವಿಚಾರಿಸಿದ್ದಾಗ ನಡೆದ ವಿಷಯ ಎಲ್ಲ ಹೇಳಿದ್ದಾನೆ. ಆದರೆ ಅಂದು ಮದ್ಯದ ಮತ್ತಿನಲ್ಲಿದ್ದ ಆರೋಪಿಗಳಿಗೆ ಕಾರು ಎಲ್ಲಿ ಬಿಟ್ಟಿದ್ದೆವು ಎಂಬುದು ಗೊತ್ತಿರಲಿಲ್ಲ. ಆದರೆ ಅಪಘಾತದ ಬಳಿಕ ಆರೋಪಿಗಳು ಕ್ಲಿಕ್ಕಿಸಿದ್ದ ಫೋಟೋಗಳನ್ನು ಆಧರಿಸಿ ಹುಡುಕಿದರೂ ಅಪಘಾತದ ಸ್ಥಳ ಸರಿಯಾಗಿ ತಿಳಿದು ಬರಲಿಲ್ಲ. ಆಗ ಆರೋಪಿಗಳ ಮೊಬೈಲ್​ಫೋನ್​ ಕರೆ ವಿವರಗಳನ್ನು ಆಧರಿಸಿ ಅಪಘಾತದ ಸ್ಥಳ ಕಂಡುಹಿಡಿದ ಪೊಲೀಸರು ಕಾರನ್ನು ಪತ್ತೆ ಹಚ್ಚಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ