ಮಂಗಳೂರು: ಮಾದಕ ವಸ್ತು ಸೇವನೆ ಹಾಗೂ ಸಾಗಾಟ ಆರೋಪದ ಮೇಲೆ ಬಂಧಿತನಾಗಿರುವ ಕೊರಿಯೋಗ್ರಾಫರ್ ಮತ್ತು ಡ್ಯಾನ್ಸರ್ ಕಿಶೋರ್ ಅಮನ್ ಜತೆ ಸಂಪರ್ಕದಲ್ಲಿದ್ದ ಇಬ್ಬರು ಯುವತಿಯರನ್ನು ಸಿಸಿಬಿ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಈ ಪೈಕಿ ಓರ್ವ ಯುವತಿಯನ್ನು ರಕ್ತದ ಮಾದರಿ ತಪಾಸಣೆಗೆ ಒಳಪಡಿಸಿದಾಗ ಡ್ರಗ್ಸ್ ಸೇವನೆ ಮಾಡಿರುವ ಕುರಿತಂತೆ ಪಾಸಿಟಿವ್ ಹಾಗೂ ಇನ್ನೋರ್ವ ಯುವತಿಗೆ ನೆಗೆಟಿವ್ ವರದಿ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಯುವತಿಯರು ಈ ಇಬ್ಬರನ್ನು ಹೊರತುಪಡಿಸಿದಂತೆ ಯಾರ ಯಾರ ಜತೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಗಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಆ ಕುರಿತಂತೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಚಲನಚಲನಗಳ ಮೇಲೆ ನಿಗಾ ಇಡಲಾಗುತ್ತಿದೆ.
ಈಗಾಗಲೇ ಬಂಧಿತರಾಗಿರುವ ಕಿಶೋರ್ ಹಾಗೂ ಅಕೀಲ್ ನೌಶಾಲ್ ಕರೊನಾ ಟೆಸ್ಟ್ ವರದಿ ಸೋಮವಾರ ಲಭ್ಯವಾಗಿಲ್ಲ. ಈ ನಡುವೆ ಪೊಲೀಸರು ಇಬ್ಬರ ಮುಂಬೈ ಹಾಗೂ ಬೆಂಗಳೂರು ನಂಟಿನ ಕುರಿತಂತೆ ಇನ್ನಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಮಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಯಿದೆ.