ಜಿಲ್ಲೆ

ಖಾಲಿ ನಂಬರ್ ಪ್ಲೇಟ್ ನ ಸ್ಕೂಟರ್ ನಲ್ಲಿ ಆಗಮಿಸಿದ ವ್ಯಕ್ತಿಗಳಿಂದ ಜೈಲು ಒಳಗೆ ಪೊಟ್ಟಣ ಎಸೆತ; ಮಾದಕ ವಸ್ತು ಶಂಕೆ

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು

ನಗರದ ಜೈಲ್ ರೋಡ್ ನಲ್ಲಿ ಸೋಮವಾರ ಸಂಜೆ ಸಂಖ್ಯೆಗಳೇ ಇಲ್ಲದ ಖಾಲಿ ನಂಬರ್ ಪ್ಲೇಟ್ ಅಳವಡಿಸಿದ ಸ್ಕೂಟರ್ ನಲ್ಲಿ ಆಗಮಿಸಿದ ಇಬ್ಬರು ವ್ಯಕ್ತಿಗಳು ಸಮೀಪದ ಜಿಲ್ಲಾ ಕಾರಾಗೃಹದ ಒಳಗೆ ಎರಡು ಪ್ಲಾಸ್ಟಿಕ್ ಪೊಟ್ಟಣವನ್ನು ಎಸೆದು ಪರಾರಿಯಾಗಿರುವ ಪ್ರಕರಣವನ್ನು ಮಾಜಿ ಮೇಯರ್ ಕವಿತಾ ಸನಿಲ್ ಅವರು ಸಾಕ್ಷಿ ಸಹಿತ ಇಲಾಖೆಯ ಮುಂದಿಟ್ಟಿದ್ದಾರೆ.

ಮಂಗಳೂರು ಕಾರಾಗೃಹದಲ್ಲಿ ಅಕ್ರಮ ಮಾದಕ ವಸ್ತು ಸಾಗಾಟ ಸಾಮಾನ್ಯವಾಗಿರುವ ಹಿನ್ನೆಲೆಯಲ್ಲಿ ಜೈಲ್ ಒಳಗೆ ಎಸೆದಿರುವ ಪ್ಲಾಸ್ಟಿಕ್ ಪೊಟ್ಟಣ ಮೂಲಕ ಮಾದಕ ವಸ್ತು ಪೂರೈಕೆಯಾಗಿರಬಹುದು ಎನ್ನುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಸೋಮವಾರ ಮಧ್ಯಾಹ್ನ 2.25 - 2.30 ನಡುವೆ ಜೈಲ್ ರೋಡ್ ನಲ್ಲಿ ಸ್ಕೂಟರೊಂದು ಆಗಮಿಸಿದೆ. ಚಾಲಕ ಸ್ಕೂಟರ್ ನಿಲ್ಲಿಸಿದ್ದು, ಹಿಂಬದಿ ಸವಾರ ತನ್ನ ಕೈಯಲ್ಲಿ ಇರುವ ಎರಡು ಪ್ಲಾಸ್ಟಿಕ್ ಪೊಟ್ಟಣಗಳನ್ನು ಎತ್ತರದ ಜೈಲು ಕಂಪೌಂಡ್ ಒಳಗೆ ಬಿಸಾಡಿದ್ದಾನೆ. ಈ ವೇಳೆ ಮತ್ತೆ ಹೊರಗೆ ಬಿದ್ದ ಒಂದು ಪೊಟ್ಟಣವನ್ನು ಎರಡನೇ ಬಾರಿ ಯಶಸ್ವಿಯಾಗಿ ಕಂಪೌಂಡ್ ಒಳಗೆ ಬಿಸಾಡಿದ್ದಾನೆ.

ಈ ಇಡೀ ಘಟನೆ ರಸ್ತೆಯಲ್ಲಿದ್ದ ಕವಿತಾ ಸನಿಲ್ ಅವರ ಕಾರಿನ ಡ್ಯಾಶ್ ಬೋರ್ಡ್ ನಲ್ಲಿರುವ ಕ್ಯಾಮರಾ ದಲ್ಲಿ ಸೆರೆಯಾಗಿದೆ.

ಪ್ರಕರಣ ಗಮನಕ್ಕೆ ಬರುತ್ತಲೇ ಕವಿತಾ ಸನಿಲ್ ಅವರು ಪೊಟ್ಟಣ ಎಸದ ವ್ಯಕ್ತಿಗಳು ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಸ್ಕೂಟರ್ ಅನ್ನು ತುಂಬಾ ದೂರದ ತನಕ ಫಾಲೋ ಮಾಡಿದ್ದಾರೆ.

ಮಾಹಿತಿ ಪಡೆದ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಸ್ಥಳಕ್ಕೆ ಧಾವಿಸಿದ್ದಾರೆ.

ಒಂದು ಪೊಟ್ಟಣದಲ್ಲಿ ಚಹಾ ಹುಡಿ ಪತ್ತೆಯಾಗಿದೆ. ಜೈಲು ಒಳಗೆ ಬಿದ್ದ ಪೊಟ್ಟಣವನ್ನು ರಫೀಕ್ ಎಂಬವನು ಸಂಗ್ರಹಿಸಿರುವುದು ಗೊತ್ತಾಗಿದೆ. ಬರ್ಕೆ ಪೊಲೀಸ್ ಠಾಣೆ ಗೆ ದೂರು ನೀಡಲಾಗುವುದು ಎಂದು ಜೈಲು ಅಧೀಕ್ಷಕ ಆಸೆ ಖಾನ್ ಶಾಸಕರಿಗೆ ಉತ್ತರಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ವೇದವ್ಯಾಸ ಕಾಮತ್ ಅವರು, ಕಾಂಪೌಂಡ್ ದಾಟಿ ಜೈಲು ಒಳಗೆ ಅಕ್ರಮ ವಸ್ತುಗಳು ಸಿಗುತ್ತವೆ ಎಂದಾದರೆ ರಾಜ್ಯ ಗೃಹ ಇಲಾಖೆ, ಬಂಧೀಖಾನೆ ಇಲಾಖೆ ಯಾವ ರೀತಿ ಕೆಲಸ ಮಾಡುತ್ತದೆ ಎಂದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಗಾಂಜಾ ಸಹಿತ ಮಾದಕ ವಸ್ತುಗಳನ್ನು ಜೈಲು ಒಳಗೆ ಪೂರೈಸಿಕೊಳ್ಳುತ್ತಿರುವ ಖೈದಿಗಳನ್ನು ಅನ್ಯ ಜೈಲುಗಳಿಗೆ ವರ್ಗಾಯಿಸುವಂತೆ ಅವರು ಒತ್ತಾಯಿಸಿದ್ದಾರೆ.