ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಹತ್ಯೆಗೈದಿರುವ ಇಬ್ಬರೂ ಆರೋಪಿಗಳು ಮಾದಕ ವಸ್ತುಗಳ ಸಂಪರ್ಕ ಹೊಂದಿರುವುದು ಮೇಲ್ನೋಟಕ್ಕೆ ಕಂಡಿದ್ದು, ಹುಬ್ಬಳ್ಳಿಯನ್ನು ಡ್ರಗ್ಸ್ ಮತ್ತು ಅಪರಾಧ ಮುಕ್ತಗೊಳಿಸಲು ಜೂನ್ ಮೊದಲ ವಾರದಿಂದ ವಿಶೇಷ ಅಭಿಯಾನ ಪ್ರಾರಂಭಿಸುವುದಾಗಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ 6 ತಿಂಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ 10 ಕೊಲೆಗಳು ನಡೆದಿವೆ. ಹಲವಾರು ಕೊಲೆ ಹತ್ಯೆ ಯತ್ನದ ಪ್ರಕರಣಗಳೂ ನಡೆದಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ರೀತಿಯ ದುಷ್ಕೃತ್ಯಗಳಿಗೆ ಗಾಂಜಾ, ಡ್ರಗ್ಸ್ನಂತಹ ಮಾದಕ ವಸ್ತುಗಳೇ ಕಾರಣ ಎಂಬುದು ಬಹಿರಂಗಗೊಂಡಿದೆ. ಹುಬ್ಬಳ್ಳಿಯಲ್ಲಿ ನಾಕೋಟಿಕ್ಸ್ ಇಲಾಖೆ ಇದ್ದರೂ ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ. ಪೊಲೀಸ್ ಇಲಾಖೆಯೂ ಮಾದಕ ವಸ್ತುಗಳನ್ನು ತಡೆಯಲು ಅಗತ್ಯ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ದೂರಿದರು.
ವಾಣಿಜ್ಯ ನಗರಿ, ಸಂಸ್ಕೃತ ಬೀಡಾಗಿದ್ದ ಹುಬ್ಬಳ್ಳಿ-ಧಾರವಾಡ ಹಂತಕರ ನಗರವಾಗುತ್ತಿದ್ದೆ. ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಹಾಗೂ ಇತರ ಮಾದಕ ವಸ್ತುಗಳು ಸರಳವಾಗಿ ಸಿಗುತ್ತಿವೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತಿತರ ನಗರಗಳಿಂದ ರೈಲುಗಳ ಮೂಲಕ ಗಾಂಜಾ ಹುಬ್ಬಳ್ಳಿಗೆ ಬರುತ್ತಿದೆ. ಈ ಮಾಹಿತಿ ಜನಸಾಮಾನ್ಯರಿಗೂ ಗೊತ್ತಿದೆ. ಆದರೆ, ನಾಕೋಟಿಕ್ಸ್ ಹಾಗೂ ಪೊಲೀಸ್ ಇಲಾಖೆಯವರು ಮಾತ್ರ ತಮಗೇನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಒಂದು ಕೆಜಿ ಗಾಂಜಾ ಸಿಕ್ಕರೆ ಆರೋಪಿ ಕನಿಷ್ಠ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ, ಪೊಲೀಸರು ತಮಗೆ ಸಿಕ್ಕಿರುವ ಗಾಂಜಾವನ್ನು 900 ಗ್ರಾಂ ಅಥವಾ ಒಂದು ಕೆಜಿಗೆ ಕಡಿಮೆ ಎನ್ನುವಂತೆ ತೋರಿಸುತ್ತಿದ್ದಾರೆ. ಇದರಿಂದ ಆರೋಪಿ ನಾಲ್ಕೈದು ದಿನಗಳಲ್ಲಿ ಜೈಲಿನಿಂದ ಹೊರಬರುತ್ತಾನೆ. ಇದನ್ನೆಲ್ಲ ಗಮನಿಸಿದರೆ ಮಾದಕ ವಸ್ತು ಸಾಗಿಸುವವರೊಂದಿಗೆ ಪೊಲೀಸ್ ಇಲಾಖೆಯ ಕೆಲವರು ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಶಾಸಕ ಟೆಂಗಿನಕಾಯಿ ಆರೋಪ ಮಾಡಿದರು.
ಮಾದಕ ವಸ್ತುವನ್ನು ಸಾಗಿಸುವ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ನಾಕೋಟಿಕ್ಸ್ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಚಿಕ್ಕ ಮಕ್ಕಳಿಗೂ ಮಾದಕ ವಸ್ತು ಸರಳವಾಗಿ ಸಿಗಬಹುದಾದ ಆತಂಕ ಎದುರಾಗಿದೆ. ಮಾದಕ ವಸ್ತು ಜಾಲದ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.
ರಾಜ್ಯವನ್ನೇ ಬೆಚ್ಚಿಬಿಳೀಸುವ ಎರಡು ಕೊಲೆಗಳು ನಡೆದರೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಹುಬ್ಬಳ್ಳಿಗೆ ಭೇಟಿ ನೀಡಿಲ್ಲ. ಎಡಿಜಿಪಿಯಂತಹ ಹಿರಿಯ ಅಧಿಕಾರಿಗಳೂ, ನಗರಕ್ಕೆ ಭೇಟಿ ನೀಡಿ, ತನಿಖೆಗೆ ಮಾರ್ಗದರ್ಶನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾದಕ ವಸ್ತು ಹಾಗೂ ಅಪರಾಧಿ ಕೃತ್ಯಗಳ ವಿರುದ್ಧ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಡ್ರಗ್ಸ್ ಮತ್ತು ಅಪರಾಧ ಮುಕ್ತ ಹುಬ್ಬಳ್ಳಿ’ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇದೊಂದು ಪಕ್ಷಾತೀತ ಹಾಗೂ ಜಾತ್ಯಾತೀಯ ಅಭಿಯಾನ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಬಿಜೆಪಿ ಮುಖಂಡರಾದ ಸಿದ್ದು ಮೊಗಲಿಶೆಟ್ಟರ, ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದಮಠ ಸುದ್ದಿಗೋಷ್ಠಿಯಲ್ಲಿ ಇದ್ದರು.
ಬಾಕ್ಸ್
ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯ ಪ್ರಕರಣದಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ ಅಂಜಲಿಯ ಹತ್ಯೆ ಆಗುತ್ತಿರಲಿಲ್ಲವೇನೋ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಲೆ, ಕಳ್ಳತನ, ಹಲ್ಲೆ ಮಾಡುವವರಿಗೆ ಪೊಲೀಸರ ಭಯ ಇಲ್ಲದಂತಾಗಿದೆ. ಪೊಲೀಸರು ಎದುರು ಬಂದರೂ ಆರೋಪಿಗಳು ಭಯಗೊಳ್ಳುವುದಿಲ್ಲ. ರೌಡಿಗಳು ಭಯಮುಕ್ತರಾಗಿ ಓಡಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪೊಲೀಸರು ತಮ್ಮ ಅಧಿಕಾರ ಉಪಯೋಗಿಸಿಕೊಂಡು ರೌಡಿಗಳ ಹೆಡೆಮುರಿ ಕಟ್ಟಬೇಕು ಎಂದು ಒತ್ತಾಯಿಸಿದರು.
* ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ವರ್ಗಾವಣೆಗೆ ಕಾಂಗ್ರೆಸ್ ಮುಖಂಡರೇ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಐಪಿಎಸ್ ಹಿರಿಯ ಖಡಕ್ ಅಧಿಕಾರಿ ಹುಬ್ಬಳ್ಳಿಗೆ ಬೇಕಾಗಿದೆ ಎಂದು ಶಾಸಕರು ಹೇಳಿದರು.
* ಟ್ರಾಫಿಕ್ ಪೊಲೀಸರು ದಂಡ ವಸೂಲಿಗೆ ಮಾತ್ರ ಸೀಮಿತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಯುವಕರು ತಮ್ಮ ವಾಹನಗಳಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ತಿರುಗುತ್ತಿದ್ದಾರೇನೋ ಎಂಬುದನ್ನು ಟ್ರಾಫಿಕ್ ಪೊಲೀಸರು ಪರಿಶೀಲಿಸಬೇಕು. ಹಿರಿಯ ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಿಂದ ಹೊರಬಂದು, ರಸ್ತೆಗೆ ಇಳಿಯಬೇಕು ಎಂದು ಒತ್ತಾಯ ಮಾಡಿದರು.
* ಮಳೆಗಾಲದ ಹಿನ್ನೆಲೆಯಲ್ಲಿ ಹು-ಧಾ ಸೆಂಟ್ರಲ್ ಕ್ಷೇತ್ರದ 25 ವಾರ್ಡ್ಗಳ ಕಾಪೋರೇಟರ್ಗಳ ಸಭೆಯನ್ನು ಇತ್ತೀಚೆಗೆ ನಡೆಸಿದ್ದೇನೆ. ಕೈಗೊಳ್ಳಬೇಕಾದ ತುರ್ತು ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಶಾಸಕ ಟೆಂಗಿನಕಾಯಿ ಹೇಳಿದರು.