ಬೆಂಗಳೂರು : ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಬಂಧಿತ ಇಬ್ಬರು ನಟಿಯರ ಹಾಗೂ ಅವರ ಸ್ನೇಹಿತರನ್ನು ತಲೆಗೂದಲು ಪರೀಕ್ಷೆಗೆ (ಹೇರ್ ಪೊಲಿಕ್) ಒಳಪಡಿಸಲು ಸಿಸಿಬಿಗೆ ಎನ್‌ಡಿಪಿಎಸ್ ನ್ಯಾಯಾಲಯವು ಶುಕ್ರವಾರ ಅನುಮತಿ ನೀಡಿದೆ.
ಆರೋಪಿಗಳು ಡ್ರಗ್ಸ್ ಸೇವನೆ ಮಾಡಿರುವುದನ್ನು ರುಜುವಾತುಪಡಿಸಲು ಕೂದಲ ಪರೀಕ್ಷೆ ವರದಿಯು ಮುಖ್ಯ ಸಾಕ್ಷೃವಾಗಲಿದೆ.
ಈ ಹಿಂದೆ ಆರೋಪಿಗಳಿಂದ ಕೂದಲು ಸಂಗ್ರಹಿಸಿ ರವಾನಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಕಾರಣಕ್ಕೆ ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲದ ತಜ್ಞರು, ಪರೀಕ್ಷೆ ನಡೆಸಲು ನಿರಾಕರಿಸಿದ್ದರು. ಇದೀಗ 2ನೇ ಬಾರಿಗೆ ಕೂದಲು ಪರೀಕ್ಷೆಗೆ ಒಳಪಡಿಸಲು ಸಿಸಿಬಿ ಮುಂದಾಗಿದೆ. ಇದಕ್ಕೆ ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ ಮತ್ತು ಸ್ನೇಹಿತರಾದ ಪ್ರಶಾಂತ್ ರಂಕಾ, ಲೂಪಮ್ ಪೆಪ್ಪರ್ ಸಾಂಬಾ, ನಿಯಾಜ್ ಅಹಮ್ಮದ್, ರಾಹುಲ್ ತೋನ್ಸೆ ವಿರೋಧ ವ್ಯಕ್ತಪಡಿಸಿದ್ದರು. ಆರೋಪಿಗಳ ಅಸಹಕಾರ ಹಿನ್ನೆಲೆಯಲ್ಲಿ ಕೂದಲು ಪರೀಕ್ಷೆಗೆ ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಮನವಿಗೆ ಸಮ್ಮತಿಸಿದ ಕೋರ್ಟ್, ಎರಡು ದಿನಗಳಲ್ಲಿ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ನಡೆಸಿ ತಲೆಕೂದಲು ಸಂಗ್ರಹಿಸಲಾಗುತ್ತದೆ ಎಂದು ಜಂಟಿ ಪೊಲೀಸ್ ಆಯುಕ್ತ(ಅಪರಾಧ) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಈಗಾಗಲೇ ಕೆಲ ಆರೋಪಿಗಳ ಕೂದಲು ಸಂಗ್ರಹಿಸಿ ಹೈದರಾಬಾದ್ ಎ್ಎಸ್‌ಎಲ್‌ಗೆ ರವಾನಿಸಿದ್ದು, ಪರೀಕ್ಷೆಗೆ ಒಪ್ಪಿಕೊಂಡಿದೆ. ಇದೀಗ ರಾಗಿಣಿ, ಸಂಜನಾ ಸೇರಿದಂತೆ ಇತರೆ ಆರೋಪಿಗಳ ಕೂದಲು ಸಂಗ್ರಹವಾಗಲಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಲೆಗೂದಲಿನಲ್ಲಿ ಸಂಗ್ರಹ : ಡ್ರಗ್ಸ್ ಸೇವಿಸಿದ ಒಂದೂವರೆ ತಿಂಗಳ ಬಳಿಕ ವ್ಯಸನಿಯ ತಲೆಗೂದಲಿನ ಬೇರಿಗೆ ಮಾದಕ ವಸ್ತುವಿನ ಕಣಗಳು ಸೇರಲಿದೆ. ಅಂದರೆ ಕೊಕೇನ್ ಅಥವಾ ಎಂಡಿಎಂಎ ಸೇವಿಸಿದರೆ ಅದೇ ಅಂಶ ತಲೆ ಕೂದಲಲ್ಲಿ ಪತ್ತೆಯಾಗಲಿದೆ. ತಲೆಗೂದಲ ಬೇರಿನಿಂದ 3 ರಿಂದ 5 ಇಂಚು ಕೂದಲು ಕತ್ತರಿಸ ರಾಸಾಯನಿಕ ವಸ್ತು ಬಳಸಿ ಡ್ರಗ್ಸ್ ಅಂಶ ಪತ್ತೆ ಹಚ್ಚಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ರಕ್ತ, ಮೂತ್ರದಲ್ಲಿ ಮಾದಕ ವಸ್ತು ಸೇವಿಸಿದ 48 ತಾಸಿನಲ್ಲಿ ಮಾತ್ರ ಡ್ರಗ್ಸ್ ಅಂಶ ಪತ್ತೆಯಾಗಲಿದೆ. ತಲೆಗೂದಲಿನಲ್ಲಿ 6 ತಿಂಗಳಿಂದ ವರ್ಷದವರೆಗೆ ಡ್ರಗ್ಸ್ ಅಂಶ ಸಿಗಲಿದೆ.