ಬೆಂಗಳೂರು : ಟ್ರಾವೆಲ್ಸ್ ಸೋಗಿನಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಎಸ್.ಜೆ. ಪಾರ್ಕ್ ಠಾಣೆ ಪೊಲೀಸರು ಬಂಧಿಸಿ 60 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಸಂಜೀವಿನಿನಗರದ ಆರ್.ಪ್ರದೀಪ್ ಕುಮಾರ್(36) ಬಂಧಿತ. 30 ಲಕ್ಷ ರೂ. ಮೌಲ್ಯದ 60 ಕೆಜಿ ಗಾಂಜಾ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎಸ್.ಜೆ. ಪಾರ್ಕ್ ವ್ಯಾಪ್ತಿಯಲ್ಲಿ ಟ್ರಾನ್ಸ್ ಪೋರ್ಟ್ ಸಲ್ಯೂಷನ್(ಬಿಟಿಎಸ್) ಎಂಬ ಟ್ರಾವೆಲ್ಸ್ ಮಾಲೀಕ ಪ್ರದೀಪ್, 25 ಕಾರುಗಳನ್ನು ಬಾಡಿಗೆಗೆ ಬಿಟ್ಟಿದ್ದ. ಜತೆಗೆ 5 ವರ್ಷಗಳಿಂದ ಕೋಲಾರದ ವಾಸಿಂ ಸಲೀಂ ಎಂಬಾತನ ಕಡೆಯಿಂದ ಗಾಂಜಾ ಖರೀದಿಸಿ ತನ್ನ ಟ್ರಾವೆಲ್ಸ್ ಕಾರಿನಲ್ಲಿಯೇ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ. ನ.20ರ ಮಧ್ಯಾಹ್ನ 3 ಗಂಟೆಯಲ್ಲಿ ಎನ್.ಎಂ ರಸ್ತೆಯಲ್ಲಿ ಕಾರಿನಲ್ಲಿ ಗಾಂಜಾ ಇಟ್ಟುಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರದೀಪ್‌ಗೆ ಗಾಂಜಾ ಸರಬರಾಜು ಮಾಡುತ್ತಿದ್ದ ವಾಸೀಂ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.