ಶಿರಸಿ: ದುಶ್ಚಟವನ್ನು ರೂಢಿಸಿಕೊಂಡರೆ ಅದರಿಂದ ಹೊರಬರುವುದು ಬಹಳ ಕಷ್ಟ. ಇದರಿಂದ ಚಿಕ್ಕಂದಿನಿಂದಲೇ ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು ಎಂದು ಶಿರಸಿ ಎಸಿ ಕೆ.ವಿ.ಕಾವ್ಯಾರಾಣಿ ಹೇಳಿದರು. ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಪೊಲೀಸ್ ಇಲಾಖೆಯ ಶಿರಸಿ ವಿಭಾಗದಿಂದ ನಗರದ ರಂಗಧಾಮದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದುಶ್ವಟದ ದಾಸರಾದರೆ ಅವರ ಕುಟುಂಬ ಮಾತ್ರವಲ್ಲ ಇಡೀ ಸಮಾಜಕ್ಕೇ ಸಮಸ್ಯೆಯಾಗಲಿದೆ. ಇದರಿಂದ ತಾವು ದುಶ್ಚಟದಿಂದ ದೂರ ಇರುವುದು ಮಾತ್ರವಲ್ಲದೇ ಇತರರೂ ಅದರಿಂದ ರೂರ ಇರುವಂತೆ ಪ್ರೇರೇಪಿಸಬೇಕು ಎಂದರು. ರೋಟರಿ ಕಾರ್ಯದರ್ಶಿ ಡಾ.ದಿನೇಶ್ ಹೆಗಡೆ ಮಾತನಾಡಿ, ಸಣ್ಣ ಪಟ್ಟಣಗಳಿಗೂ ಡ್ರಗ್ಸ್ ಜಾಲ ಹರಡುತ್ತಿರುವುದು ಆತಂಕಕಾರಿ. ತಂಬಾಕು ಉತ್ಪನ್ನಗಳ ಬಳಕೆಯಿಂದ ಪ್ರತಿ ವರ್ಷ ಸಾವಿರಾರು ಜನ ಕ್ಯಾನ್ಸರ್‌ನಿಂದ ಸಾಯುತ್ತಿದ್ದಾರೆ ಇದರಿಂದ ಮಾದಕ ದ್ರವ್ಯದಿಂದ ದೂರವಿರಬೇಕು ಎಂದರು. ಡಿವೈಎಸ್‌ಪಿ ಗೀತಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಿರಸಿ ನಗರ ಠಾಣೆ ಪಿಎಸ್‌ಐ ನಾಗಪ್ಪ.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಕೊಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ, ಶಿರಸಿ ಅರ್ಬನ್ ಬ್ಯಾಂಕ್ ನಿರ್ದೇಶಕ ನಿತೀನ ಕಾಸರಕೋಡ, ಸಾಮಾಜಿಕ ಕಾರ್ಯಕರ್ತ ವಿ.ಪಿ.ಹೆಗಡೆ ವೈಶಾಲಿ, ಶಹರ ಠಾಣೆ ಸಿಪಿಐ ಶಶಿಕಾಂತ ವರ್ಮಾ, ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ ಗೌಡ, ಉಪಸ್ಥಿತರಿದ್ದರು.ಹೊಸ ಮಾರುಕಟ್ಟೆ ಠಾಣೆ ಪಿಎಸ್‌ಐ ರತ್ನಾ ಕುರಿ ಸ್ವಾಗತಿಸಿದರು. ಪೊಲೀಸ್ ಸಿಬ್ಬಂದಿ ರಮೇಶ ಮುಚ್ಚಂಡಿ ಕಾರ್ಯಕ್ರಮ ನಿರೂಪಿಸಿದರು. ಕೀರ್ತಿ ಸಂಗಡಿಗರು ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನಗರದ ಬಿಡ್ಕಿ ಬೈಲ್‌ನಿಂದ ನಗರದ ಪ್ರಮುಖ ಬೀದಿಗಳಲ್ಲಿ ಮಾದಕ ದ್ರವ್ಯ ವಿರೋಽ ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಹುಮಾನ: ಪ್ರಬಂಧ ಸ್ಪರ್ಧೆಯಲ್ಲಿ ಚಂದನ ಪಿಯು ಕಾಲೇಜ್‌ನ ಅನನ್ಯ ಭಟ್,ಅರಣ್ಯ ಮಹಾವಿದ್ಯಾಲಯದ ವಿನೋದ್, ಎಂಇಎಸ್ ಕಾಲೇಜಿನ ಸುವರ್ಣ ಸಾವನ್ ಹುಂಡಿ ಪ್ರಥಮ, ಅರಣ್ಯ ಮಹಾವಿದ್ಯಾಲಯದ ಬಸವ ಪ್ರಭು ಎಂ ಬಡಿಗೇರ್, ತಾಯಕ್ಕ ನಿಂಗಪ್ಪ ಕರಿಗೌಡ ದ್ವಿತೀಯ ಹಾಗೂ ಮಾರಿಕಾಂಬಾ ಕಾಲೇಜಿನ ಧನ್ಯ ನಾಗರಾಜ್ ಹೆಗಡೆ, ಚಂದನ.ಎಸ್ ತೃತೀಯ ಸ್ಥಾನ ಪಡೆದಿದ್ದು, ಅವರಿಗೆ ಬಹುಮಾನ ವಿತರಿಸಲಾಯಿತು.