ಮಾದಕ ದ್ರವ್ಯ ವಿರೋಧಿ ದಿನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಉದ್ಘಾಟಿಸಿದರು. ಸುಧೀರ್ ಕುಮಾರ್ ರೆಡ್ಡಿ, ನ್ಯಾ.ಜೈಬುನ್ನೀಸಾ, ಡಾ.ಅಶ್ವಿನಿ ಶೆಟ್ಟಿ ಮೊದಲಾದವರಿದ್ದರು. 
ಜಿಲ್ಲೆ

ಮಾದಕ ವಸ್ತುಗಳ ಜಾಲದಿಂದ ದೇಶದ ಭವಿಷ್ಯಕ್ಕೆ ಅಪಾಯ

ಹರೀಶ ಎಂ.
ಮಂಗಳೂರು: ಯುವ ಸಮುದಾಯವನ್ನು ಮಾದಕ ವಸ್ತುಗಳ ಜಾಲದಲ್ಲಿ ಸಿಲುಕಿಸಿದರೆ ದೇಶದ ಭವಿಷ್ಯವೇ ಹಾಳಾಗಲಿದೆ. ಆದ್ದರಿಂದ ಮಾದಕ ದ್ರವ್ಯಗಳ ಬಳಕೆ ಮತ್ತು ಅಕ್ರಮ ಸಾಗಣೆ ತಡೆಗಟ್ಟಲು ಸಮಾಜದ ಎಲ್ಲ ವರ್ಗಗಳ ಸಹಭಾಗಿತ್ವ ಅಗತ್ಯ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದರು.
ಮಂಗಳೂರು ನಗರ ಪೊಲೀಸ್ ವತಿಯಿಂದ ಗುರುವಾರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಯೇನೆಪೊಯ ಡೀಮ್ಡ್ ಟು ಬಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಾದಕ ದ್ರವ್ಯ ವಿರೋಧಿ ದಿನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ - 2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ದೇಶವನ್ನು ನಾಶಪಡಿಸಲು ಬಾಂಬ್ ಅಥವಾ ಶಸ್ತ್ರಾಸ್ತ್ರಗಳ ಅಗತ್ಯವಿಲ್ಲ. ಯುವಜನರನ್ನು ಮಾದಕ ವಸ್ತುಗಳ ವ್ಯಸನಕ್ಕೆ ದೂಡಿದರೆ ದೇಶದ ಅಭಿವೃದ್ಧಿಯೇ ಕುಂಠಿತವಾಗುತ್ತದೆ. ಮಾದಕ ದ್ರವ್ಯಗಳು ವ್ಯಕ್ತಿಯ ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಸಮಾಜದ ಶಾಂತಿಯನ್ನು ಹಾಳುಮಾಡುತ್ತವೆ ಎಂದರು.
ಮಾದಕ ದ್ರವ್ಯಗಳ ಅಕ್ರಮ ಸಾಗಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕೇವಲ ಸರ್ಕಾರ ಅಥವಾ ಪೊಲೀಸ್ ಇಲಾಖೆ ಮಾತ್ರವಲ್ಲ, ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ವಿದ್ಯಾರ್ಥಿಗಳು ಹಾಗೂ ಯುವಕರು ತಮ್ಮ ಗುರಿಗಳತ್ತ ಗಮನಹರಿಸಿ ಮಾದಕ ವಸ್ತುಗಳಿಂದ ದೂರವಿರಬೇಕು ಎಂದರು.
360ಕ್ಕೂ ಅಧಿಕ ಕೈದಿಗಳು
ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಜೈಬುನ್ನೀಸಾ ಅವರು ಮಾತನಾಡಿ, ನ್ಯಾಯಾಂಗ ಇಲಾಖೆಯ ಮೂಲಕವೂ ನಶೆ ಮುಕ್ತ ಭಾರತ ನಿರ್ಮಾಣದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಶೇ.60-65ರಷ್ಟು ಕೈದಿಗಳು ಮಾದಕ ವಸ್ತುವಿನ ನಶೆಯಲ್ಲಿ ಇರುವವರೇ ಇದ್ದಾರೆ. ಜೈಲಿನಲ್ಲಿ 210 ಕೈದಿಗಳನ್ನು ಮಾತ್ರ ಇರಿಸಬಹುದಾಗಿದ್ದು, ಪ್ರಸ್ತುತ 360ಕ್ಕೂ ಅಧಿಕ ಮಂದಿ ಇದ್ದಾರೆ. ಮಾದಕ ವಸ್ತು ಸೇವನೆ ಪಿಡುಗಿನಿಂದ ಮಂಗಳೂರು ನಗರವನ್ನು ಮುಕ್ತ ಮಾಡುವಲ್ಲಿ ಪೊಲೀಸ್ ಇಲಾಖೆ ಶ್ರಮ ವಹಿಸುತ್ತಿದೆ ಎಂದರು.
400 ಮಂದಿಯ ಬಂಧನ
ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಳೆದ ಒಂದು ವರ್ಷದಲ್ಲಿ 400 ಮಂದಿ ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಲಾಗಿದ್ದು, 200 ಮಂದಿ ಸೇವನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ಹಲವು ಮಂದಿ ಹೆತ್ತವರು ತಮ್ಮ ಮಕ್ಕಳ ವರ್ತನೆಯಲ್ಲಿ ಬದಲಾವಣೆ, ಬ್ಯಾಗ್‌ಗಳಲ್ಲಿ ಮಾದಕ ವಸ್ತು ಪತ್ತೆಯಾಗಿರುವ ಮಾಹಿತಿ ನೀಡಿದ್ದಾರೆ. ಪೋಷಕರು, ಶಿಕ್ಷಣ ಸಂಸ್ಥೆಗಳು ಮತ್ತು ಸಮಾಜ ಈ ಮೂರು ವಿಭಾಗಗಳು ಮಕ್ಕಳ ಬಗ್ಗೆ ಸರಿಯಾಗಿ ನಿಗಾ ವಹಿಸಿ, ಇಲಾಖೆ ಗಮನಕ್ಕೆ ತಂದರೆ ಮುಂದಿನ 1-2 ವರ್ಷದಲ್ಲಿ ಮಾದಕ ಮುಕ್ತ ಮಂಗಳೂರು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಸಂಚಾರ ಅಪರಾಧ ವಿಭಾಗದ ಡಿಸಿಪಿ ರವಿಶಂಕರ್ ಕೆ, ಡಿಸಿಪಿ ಸಿಎಆರ್ ಮಂಗಳೂರು ನಗರ ಉಮೇಶ್ ಪಿ., ಪ್ರೊಬೆಷನರಿ ಐಎಎಸ್ ಆಧಿಕಾರಿ ಡಾ. ಅರ್ಚಿತ್, ಯೇನೆಪೊಯ ವಿವಿಯ ಇಡಿಒಎ ಡಾ.ಅಶ್ವಿನಿ ಶೆಟ್ಟಿ, ಲೀ ಎಂಟರ್‌ಟೈನ್‌ಮೆಂಟ್ ಮುಖ್ಯಸ್ಥ ಸಂಜಯ್ ಪಾಟೀಲ್ ಉಪಸ್ಥಿತರಿದ್ದರು.
ಬಾಲ ಮನೋವೈದ್ಯೆ ಡಾ.ರುಕ್ಸಾನಾ ಹಸನ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಕಾನೂನು ಸುವ್ಯವಸ್ಥೆ ಡಿಸಿಪಿ ಮಿಥುನ್ ಎಚ್.ಎನ್. ಪ್ರಸ್ತಾವಿಸಿದರು. ಎಸಿಪಿ ದಕ್ಷಿಣ ವಿಜಯ ಕ್ರಾಂತಿ ಸ್ವಾಗತಿಸಿದರು. ನಯನಾ ಶೆಟ್ಟಿ, ತ್ರಿಶಾ ಕಾರ್ಯಕ್ರಮ ನಿರೂಪಿಸಿದರು. ಪಣಂಬೂರು ಪೊಲೀಸ್ ಇನ್ ಸ್ಪೆಕ್ಟರ್ ಸಲೀಂ ಅಬ್ಬಾಸ್ ವಂದಿಸಿದರು.