ಜಿಲ್ಲೆ

ಅಪರಾಧ ಹೆಚ್ಚಿಸುತ್ತಿರುವ ಮಾದಕ ವಸ್ತು: ರಾಜ್ಯ ಎನ್‌ಎಸ್‌ಎಸ್ ಘಟಕದ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ ಆತಂಕ

ಮಂಡ್ಯ: ಮಾದಕ ವಸ್ತುಗಳ ಸೇವನೆಯಿಂದ ದೇಶದಲ್ಲಿ ಅಪರಾಧ ಪ್ರಕರಣ ಹೆಚ್ಚಾಗುತ್ತಿವೆ ಎಂದು ರಾಜ್ಯ ಎನ್‌ಎಸ್‌ಎಸ್ ಘಟಕದ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ ಆತಂಕ ವ್ಯಕ್ತಪಡಿಸಿದರು.

ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಕೆ.ವಿ ಶಂಕರಗೌಡ ಸಭಾಂಗಣದಲ್ಲಿ ಪಿಇಎಸ್ ಪದವಿ ಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕ, ರಾಷ್ಟ್ರೀಯ ಸೇವಾ ಯೋಜನಾ ರಾಜ್ಯ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ನಶೆ ಮುಕ್ತ ಭಾರತ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಸರಿಸುಮಾರು 25 ಕೋಟಿಗೂ ಹೆಚ್ಚಿನ ಜನರು ಮಾದಕ ವಸ್ತುಗಳ ವ್ಯಸನಿಗಳಿದ್ದಾರೆ. ಅದರಲ್ಲಿ ಯುವ ಜನತೆಯ ಪ್ರಮಾಣವೇ ಹೆಚ್ಚು ಎಂದು ಹೇಳಿದರು.

ಕೇಂದ್ರ ಸರ್ಕಾರ ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಆ.1 ರಿಂದ 31ರವರೆಗೆ ದೇಶಾದ್ಯಂತ ನಶೆ ಮುಕ್ತ ಭಾರತ ಅಭಿಯಾನ ಜಾಥಾ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಜತೆಗೂಡಿ ಬೈಕ್ ಜಾಥಾವನ್ನು ಬಂಡಿಪುರದಿಂದ ಬೀದರ್‌ವರೆಗೆ ಮಾಡಲಾಗುವುದು. ದಾರಿಯುದ್ದಕ್ಕೂ ಆಯ್ದ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಯುವ ಸಮೂಹ ಹೊಂದಿರುವ ದೇಶ ಭಾರತ. ಆದರೆ ಇಲ್ಲಿ ಯುವಕರೇ ಹೆಚ್ಚು ಮಾದಕ ವ್ಯಸನಿಗಳಾಗಿರುವುದು ದುಃಖದ ಸಂಗತಿ. ನಮ್ಮ ದೇಶದಲ್ಲಿ 3.1 ಕೋಟಿಗೂ ಅಧಿಕ ಜನರು ಗಾಂಜಾ ವ್ಯಸನಿಗಳಾಗಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ನಮ್ಮ ರಾಜ್ಯದಲ್ಲಿ 6.5 ಲಕ್ಷ ಎನ್‌ಎಸ್‌ಎಸ್ ಸ್ವಯಂ ಸೇವಕರಿದ್ದಾರೆ. 14 ಕೋಟಿಗೂ ಹೆಚ್ಚಿನ ಯುವ ಜನತೆ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಇವರೆಲ್ಲರ ಸಹಯೋಗದೊಂದಿಗೆ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಬೇಕಿದೆ. ನಿಮ್ಮ ಸುತ್ತ ಮುತ್ತಲಿನವರು ಮಾದಕ ವ್ಯಸನಿಗಳಾಗಿದ್ದರೇ ಅವರನ್ನು ಮಾದಕ ವಸ್ತುಗಳಿಂದ ದೂರವಿರುವಂತೆ ಪ್ರೇರೇಪಿಸಬೇಕು ಎಂದು ತಿಳಿ ಹೇಳಿದರು.

ಆರೋಗ್ಯ ಇಲಾಖೆಯ ವಿಶ್ವಜಿತ್ ನಾಯಕ್ ಮಾತನಾಡಿ, ಒಂದು ದೇಶವನ್ನು ಹಾಳು ಮಾಡಲು ಯುದ್ಧವನ್ನೇ ಮಾಡಬೇಕು ಎಂದೆನಿಲ್ಲ. ಅ ದೇಶದ ಯುವ ಸಮೂಹ ಮಾದಕ ವ್ಯಸನಿಗಳಾದರೆ ಸಾಕು ಅ ದೇಶ ನಾಶವಾಗುತ್ತದೆ. ಸಾಮಾನ್ಯವಾಗಿ ಡ್ರಗ್ಸ್‌ಗಳನ್ನು ವೈದ್ಯಕೀಯ ಚಿಕಿತ್ಸೆಗೆ ಅಗತ್ಯ ಪ್ರಮಾಣದಲ್ಲಿ ಬಳಸಲಾಗುತ್ತದೆ. ಡ್ರಗ್ಸ್ ಸೇವನೆಯಿಂದ ಮಿದುಳಿನಲ್ಲಿ ಉತ್ಪತ್ತಿಯಾಗುವ ಡೊಕೋಮೀನ್ ಅಂಶದಿಂದ ಉಲ್ಲಾಸ ಸಿಗುತ್ತದೆ. ಮಾದಕ ವಸ್ತುಗಳನ್ನು ಕುತೂಹಲಕ್ಕಾಗಿ ಒಮ್ಮೆ ಸೇವನೆ ಮಾಡಿದರೆ ಅದನ್ನು ಬೀಡುವುದು ಕಷ್ಟಕರ. ಮಾದಕ ವ್ಯಸನಿಗಳು ವ್ಯಸನದ ಸಂದರ್ಭದಲ್ಲಿ ಅರಿವೇ ಇಲ್ಲದೆ ಕ್ರೂರ ಮಟ್ಟಕ್ಕೆ ಇಳಿದು ಅಪರಾಧ ಎಸಗುತ್ತಾರೆ. ಮಾದಕ ವ್ಯಸನಕ್ಕೆ ಬಲಿಯಾಗಿರುವ ಎಷ್ಟೋ ನಿದರ್ಶನಗಳು ನಮ್ಮ ಮುಂದಿವೆ ನಾವೆಲ್ಲರೂ ಒಗ್ಗೂಡಿ ನಶಾ ಮುಕ್ತ ಭಾರತವನ್ನು ಕಟ್ಟಬೇಕಿದೆ ಯುವ ಜನತೆ ಮಾದಕ ವಸ್ತುಗಳಿಂದ ದೂರವಿರಿ ಎಂದು ತಿಳಿಸಿದರು.

ಕರ್ನಲ್ ಜಗದೀಪ್ ಸಿಂಗ್ ಮಾತನಾಡಿ, ಯುವ ಜನತೆ ತಾವು ಏನೇನು ಸೇವನೆ ಮಾಡುತ್ತಿದ್ದೇವೆ ಎಂಬುದರ ಕುರಿತು ಜಾಗೃತರಾಗಿರಬೇಕು. ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ದುಶ್ಚಟಗಳಿಂದ ದೂರವಿರಬಹುದು. ಯುವ ಜನತೆ ನಮ್ಮ ದೇಶದ ಶಕ್ತಿ. ಯುವಕರು ಭಾರತೀಯ ಸೇನೆಯಲ್ಲಿ ಬಂದು ದೇಶ ಸೇವೆ ಮಾಡಿ ಎಂದು ಕರೆ ನೀಡಿದರು.

ಗೃಹ ಇಲಾಖೆಯ ಅಭಿಷೇಕ್ ಮಾತನಾಡಿ, ಮಾದಕ ವಸ್ತುಗಳ ಸೇವನೆ ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತದೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಪಟುಗಳು ಕ್ರೀಡೆಯಲ್ಲಿ ಸಾಧನೆ ಮಾಡಲು ಡ್ರಗ್ಸ್ ಬಳಸಿ ತಮ್ಮ ಉದಯೋನ್ಮುಖ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಡ್ರಗ್ಸ್ ಹಾಗೂ ಮಾದಕ ವಸ್ತುಗಳ ಸೇವನೆ ಕಾನೂನು ಬಾಹಿರವಾಗಿದೆ. ನಗರ ಪ್ರದೇಶಗಳಲ್ಲಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ವಿದ್ಯಾರ್ಥಿಗಳು ಡ್ರಗ್ಸ್ ಚಟಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ನಿಮ್ಮ ಸುತ್ತ ಮುತ್ತಲು ಯಾರಾದರೂ ಡ್ರಗ್ಸ್ ಮಾರಾಟ ಮಾಡುತ್ತಿರುವ ಕುರಿತು ನಿಮಗೆ ಖಚಿತ ಮಾಹಿತಿ ಇದ್ದರೆ ಹತ್ತಿರ ಪೊಲೀಸ್ ಠಾಣೆಗೆ ತಿಳಿಸಿ. ಇದರಿಂದ ಎಷ್ಟೋ ಮನೆಗಳಲ್ಲಿ ಶಾಂತಿ ನೆಲೆಸುತ್ತದೆ. ಯುವ ಸಮೂಹ ಭಾರತದ ಭವಿಷ್ಯ ಹಾಗಾಗಿ ಮಾದಕ ವಸ್ತುಗಳಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.

ಮೈ ಭಾರತ್ ಪೋರ್ಟಲ್ನ ಮುಸ್ತಫಾ ಮಾತನಾಡಿ, ಭಾರತವನ್ನು ನಶೆ ಮುಕ್ತವಾಗಿಸಲು ಈ ಬೈಕ್ ಜಾಥಾ ಅಭಿಯಾನ ಆರಂಭಿಸಿದ್ದೇವೆ. ಮಾದಕ ವಸ್ತುಗಳಿಂದ ದೂರವಿದ್ದು, ಸುಂದರ ರಾಜ್ಯ ಮತ್ತು ದೇಶವನ್ನು ಕಟ್ಟಬೇಕಿದೆ. ಯುವ ಜನತೆ ನಮ್ಮೊಂದಿಗೆ ಸೇರಿ ನಶೆ ಮುಕ್ತ ಅಭಿಯಾನಕ್ಕೆ ಕೈ ಜೋಡಿಸಿ ಎಂದು ಕರೆ ನೀಡಿದರು.

ಮಾಜಿ ಮಿಸ್ ಇಂಡಿಯಾ ರೇಣುಕಾ ಮಾತನಾಡಿ, ಡ್ರಗ್ಸ್ ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಉಂಟಾಗುತ್ತವೆ. ದುಶ್ಚಟಗಳಿಗೆ ದಾಸರಾಗದೆ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ಉತ್ತಮ ವಾತಾವರಣದಲ್ಲಿ ಇರಿ. ಭಾರತದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ತಿಳಿಸಿದರು.

ಬೈಕ್ ರೈಡರ್ ಡಾ.ಜಾಫರ್ ಮಾತನಾಡಿ, ಕೇವಲ ಕುತೂಹಲಕ್ಕಾಗಿ ನೀವು ಡ್ರಗ್ಸ್ ಸೇವನೆ ಮಾಡಿದರೆ, ಅದು ನಿಮ್ಮನ್ನು ಮಾದಕ ವ್ಯಸನದತ್ತ ಕೊಂಡೊಯ್ಯುತ್ತದೆ. ಇದರಿಂದಾಗಿ ನಿಮ್ಮ ಕುಟುಂಬ ಪಶ್ಚತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಿಇಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಷಣ್ಮುಗಂ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮಾದಕ ವ್ಯಸನ ಹಾಗೂ ದುಶ್ಚಟಗಳಿಂದ ಅನೇಕ ಮಕ್ಕಳು ಸಾಯುತ್ತಿದ್ದಾರೆ. ನಾವೆಲ್ಲರೂ ನಮಗೆ ಸಾಧ್ಯವಾದಷ್ಟು ಮಾದಕ ವಸ್ತುಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಎಲ್ಲರೂ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಹೇಳಿದರು.

ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು. ನಂತರ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ದೂರವಿರುವಂತೆ ಪ್ರತಿಜ್ಞಾವಿಧಿ ಬೋಧಿಸಿದರು.