ಉಡುಪಿ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಣಿಕೆ, ಮಾರಾಟ ಹಾಗೂ ಬಳಕೆ ಸಂಪೂರ್ಣವಾಗಿ ನಿಯಂತ್ರಿಸಲು ಎಲ್ಲಾ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್.ಸಿ.ಓ.ಆರ್.ಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾದಕ ವಸ್ತುಗಳಿಗೆ ಯುವ ಸಮುದಾಯ ಹೆಚ್ಚು ಆಕರ್ಷಿತವಾಗುತ್ತಿದೆ. ಇವುಗಳ ಬಳಕೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ತಂಬಾಕು ಉತ್ಪನ್ನಗಳು ಸೇರಿದಂತೆ ಮಾದಕ ವಸ್ತುಗಳ ದುಶ್ಚಟಗಳಿಗೆ ಕಾರ್ಮಿಕರು ವ್ಯಸನಿಗಳಾಗುತ್ತಿದ್ದಾರೆ. ಇವರ ಮನಪರಿವರ್ತನೆ ಕಾರ್ಯಕ್ರಮಗಳನ್ನು ಕಾರ್ಮಿಕ ಇಲಾಖೆಯ ವತಿಯಿಂದ ನಡೆಸಬೇಕು ಎಂದರು. ಪಾರ್ಸೆಲ್ಗಳನ್ನು ತಪಾಸಣೆ ಮಾಡಿ
ಅಂಚೆ ಇಲಾಖೆಯ ಪಾರ್ಸೆಲ್ಗಳಲ್ಲಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿರುವ ಬಗ್ಗೆ ಯಾವುದೇ ದೂರುಗಳು ಕಂಡುಬರುತ್ತಿಲ್ಲ. ಖಾಸಗಿ ಪಾರ್ಸೆಲ್ ಸರ್ವೀಸ್ಗಳ ಕಚೇರಿ ಹಾಗೂ ಆನ್ಲೈನ್ ಮಾರುಕಟ್ಟಯೆ ಗೋದಾಮು ಪರಿಶೀಲಿಸಬೇಕು. ರೈಲ್ವೆ ಇಲಾಖೆಯ ಸಿಬ್ಬಂದಿ ನಿಲ್ದಾಣದಲ್ಲಿ ಮಾದಕ ವಸ್ತುಗಳ ಸರಬರಾಜು ಬಗ್ಗೆ ನಿಗಾ ವಹಿಸಬೇಕು ಎಂದರು.
80 ಸಾವಿರ ರೂ. ದಂಡ ವಸೂಲಿ
ಜಿಲ್ಲೆಯಲ್ಲಿ ಅಸುರಕ್ಷಿತ ಆಹಾರ ಪದಾರ್ಥಗಳನ್ನು ತಯಾರಿಸಿದ ಬಗ್ಗೆ 9 ಪ್ರಕರಣಗಳು ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗಿದ್ದು, ಅವುಗಳಲ್ಲಿನ 6 ಪ್ರಕರಣಗಳಲ್ಲಿ 80 ಸಾವಿರ ರೂ. ದಂಡ ವಿಧಿಸಲಾಗಿದೆ. ಇನ್ನು 3 ಪ್ರಕರಣಗಳು ವಿಚಾರಣೆ ಹಂತದಲ್ಲಿದೆ. ಜೀವಕ್ಕೆ ಹಾನಿ ಉಂಟು ಮಾಡುವಂತಹ ಆಹಾರ ಪದಾರ್ಥಗಳ ಮಾರಾಟ ಮಾಡಿದ 6 ಪ್ರಕರಣಗಳು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ದಾಖಲಾಗಿದೆ. ಮಾರಾಟವಾಗುವ ಸಿದ್ಧ ಆಹಾರಗಳ ಗುಣಮಟ್ಟ ಹಾಗೂ ಮತ್ತಿತರ ಆಹಾರ ಪದಾರ್ಥಗಳ ನಿರಂತರವಾಗಿ ಸ್ಯಾಂಪಲ್ಗಳನ್ನು ತೆಗೆದು ಪ್ರಯೋಗ ಶಾಲೆಗಳಿಗೆ ವಿಶ್ಲೇಷಣೆಗೆ ಕಳುಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ..ಅರುಣ್ ಕೆ ಮಾತನಾಡಿ, ರ್ನಿಬಂಧಿತ ಮತ್ತುಬರಿಸುವ ಔಷಧಿಗಳು ಜನಸಾಮಾನ್ಯರೆಲ್ಲರಿಗೂ ಮಾರಾಟ ಮಾಡುವ ಹಾಗಿಲ್ಲ. ಈ ಬಗ್ಗೆ ಜಿಲ್ಲೆಯ ಔಷಧ ನಿಯಂತ್ರಣ ಅಧಿಕಾರಿಗಳು ಔಷಧಿ ಅಂಗಡಿಗಳ ಬಗ್ಗೆ ಎಚ್ಚರವಹಿಸಬೇಕು ಎಂದರು. ಸಭೆಯಲ್ಲಿ ಎಎಸ್ಪಿ ಪಿ.ಎ. ಹೆಗಡೆ, ಡಿ.ಎಫ್.ಓ ಗಣಪತಿ ಮತ್ತಿತರರು ಉಪಸ್ಥಿತರಿದ್ದರು.