ಜಿಲ್ಲೆ

ಮಾರುತಿ ದೇವಸ್ಥಾನದಲ್ಲಿ ಔಷಧ ವಿತರಣೆ

Haveri

ಹಿರೇಕೆರೂರ: ತಾಲೂಕಿನ ಸಾತೇನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಾರುತಿ (ಶಾಂತೇಶ) ದೇವಸ್ಥಾನದಲ್ಲಿ ದಸರಾ ಹಬ್ಬದ ನಿಮಿತ್ತ ಮಹಿಳೆಯರಿಗೆ, ಬರಡು ದನಗಳಿಗೆ ದೇವರ ಹೆಸರಿನಲ್ಲಿ ಕಾಯಿಯ ಮೂಲಕ ಔಷಧ ನೀಡುವುದು ಹಾಗೂ ವಿವಿಧ ಧಾರ್ವಿುಕ ಕೈಂಕರ್ಯಗಳು ಜರುಗಿದವು.

ಸೋಮವಾರ ಬೆಳಗ್ಗೆ 6 ಗಂಟೆಗೆ ಶ್ರೀ ಮಾರುತಿ (ಶಾಂತೇಶ) ದೇವರಿಗೆ ಪಂಚಾಮೃತ ಅಭಿಷೇಕ, 8 ಗಂಟೆಗೆ ಹೂವಿನ ಅಲಂಕಾರ ಪೂಜೆ, ಮಧ್ಯಾಹ್ನ 12 ಗಂಟೆಗೆ ದಿ. ಚಂದ್ರಮ್ಮ ಹಾಗೂ ದಿ. ಡಾ. ಚಂದ್ರಪ್ಪ ಮಾನಿಬಣಕಾರ ವಂಶಸ್ಥರಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಮಧ್ಯಾಹ್ನ 2 ಗಂಟೆಗೆ ಅರ್ಚಕರಾದ ಶ್ರೀ ವಾಮನಾಚಾರ್ಯ, ಶ್ರೀ ಬದರಿನಾಥ ಅರ್ಚಕರಿಂದ ಮಕ್ಕಳಾಗದ ಮಹಿಳೆಯರಿಗೆ ಹಾಗೂ ಬರಡು ದನಗಳಿಗೆ ದೇವರ ಆಶೀರ್ವಾದದ ತೆಂಗಿನಕಾಯಿಯೊಂದಿಗೆ ಔಷಧ ವಿತರಿಸಲಾಯಿತು. ಸರದಿ ಸಾಲಿನಲ್ಲಿ ನಿಂತು ಸಾವಿರಾರು ಮಹಿಳೆಯರು ಹಾಗೂ ಜಾನುವಾರುಗಳ ಮಾಲೀಕರು ಔಷಧ ಪಡೆದರು. ಸಂಜೆ ಬನ್ನಿ ಮುಡಿಯುವ ಉತ್ಸವ ಜರುಗಿತು.

ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಮಾನಿಬಣಕಾರ, ಶೇಖಪ್ಪ ತಳವಾರ, ಸುರೇಶ ಮಾನೇರ, ಶೋಭಾ ಕಾನಕೇರಿ, ವೀರೇಶ ಬಳಿಗಾರ, ಸುರೇಶ ಕರಡೇರ, ಏಕಾಂತ ಪೂಜಾರ, ರಮೇಶ ಉಪ್ಪಾರ, ಪ್ರಕಾಶ ಪೂಜಾರ, ಬಸವರಾಜ ಬನ್ನಿಹಟ್ಟಿ, ಗ್ರಾಮಸ್ಥರು ಇದ್ದರು.