ನರಗುಂದ: ಬೈಕ್ ಮೂವರು ಸಂಚರಿಸಬಾರದು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನಾ ಪರವಾನಗಿ ಪತ್ರವಿದ್ದರಷ್ಟೇ ಬೈಕ್ ಚಲಾಯಿಸಬೇಕು ಮತ್ತು ಬೈಕ್ ಮೇಲೆ ಮೂವರು ಎಂದಿಗೂ ಪ್ರಯಾಣಿಸಬಾರದು ಎಂದು ಸಿಪಿಐ ಮಂಜುನಾಥ ನಡುವಿನಮನಿ ಹೇಳಿದರು.
ಪಟ್ಟಣದ ಯಡೆಯೂರ ಸಿದ್ಧಲಿಂಗೇಶ್ವರ ಕಾಲೇಜ್ನಲ್ಲಿ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಹಾಗೂ ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾರೊಬ್ಬರೂ ಮಾದಕ ವಸ್ತುಗಳನ್ನು ಸೇವಿಸಬಾರದು. ಎಟಿಎಂ ಹಣ ತೆಗೆಯುವಾಗ ಜಾಗರೂಕರಾಗಿರಬೇಕು. ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಅಪರಿಚಿತರಿಂದ ಬರುವ ಮೊಬೈಲ್ಫೋನ್ ಕಾಲ್ ಬಗ್ಗೆ ಎಚ್ಚರವಿರಬೇಕು ಎಂದರು.
ಸಂಸ್ಥೆ ಕಾರ್ಯದರ್ಶಿ ಮಹೇಶ ಪಾಟೀಲ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ತಂದೆ, ತಾಯಿಯ ಮತ್ತು ಸಂಸ್ಥೆ ಕೀರ್ತಿ ಹೆಚ್ಚಿಸಲು ಸರಿಯಾದ ರೀತಿಯಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗವಹಿಸಿ ದೇಶದ ಉತ್ತಮ ನಾಗರಿಕರಾಗಿ ಬೆಳೆಯಬೇಕು ಎಂದರು. ಪ್ರಾಚಾರ್ಯ ಎಂ.ಜಿ. ಬೋಗಾರ ಹಾಗೂ ಉಪನ್ಯಾಸಕ ಎನ್.ಎ. ಕಿತ್ತೂರ ಮಾತನಾಡಿದರು. ಉಪನ್ಯಾಸಕ ಆರ್.ಎಸ್. ಗೆಜ್ಜಿ ನಿರ್ವಹಿಸಿದರು.