ಮಂಗಳೂರು: ಮಾದಕ ದ್ರವ್ಯ ಸೇವನೆಯ ಸಮಸ್ಯೆ ಹೊಸತಲ್ಲ. ಅದು ಗಂಭೀರ ಸಮಸ್ಯೆಯ ರೂಪು ತಳೆದಿದೆ. ಪ್ರತಿ ಗಂಟೆಗೆ ಸರಾಸರಿ ಇಬ್ಬರಂತೆ ಡ್ರಗ್ಸ್ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಹೆಚ್ಚಿನವರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಗಮನಾರ್ಹ ಎಂದು ರೋಶನಿ ನಿಲಯ ಕಾಲೇಜಿನ ಅಪರಾಧಶಾಸ್ತ್ರ ವಿಭಾಗದ ಉಪನ್ಯಾಸಕಿ ಇರ್ಫಾ ಆಯೆಷಾ ಹೇಳಿದರು
ಡಾ.ಮಹಾಂತ ಶಿವಯೋಗಿ ಜನ್ಮದಿನಾಚರಣೆ ಪ್ರಯುಕ್ತ ವಿಶ್ವವಿದ್ಯಾಲಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗ ಹಾಗೂ ಹಿಂದಿ ವಿಭಾಗಗಳ ಸಹಯೋಗದಲ್ಲಿ ಇತ್ತೀಚೆಗೆ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಪ್ರಾಂಶುಪಾಲೆ ಡಾ.ಅನಸೂಯ ರೈ ಮಾತನಾಡಿ, ವಿದ್ಯಾವಂತ ಯುವಕರಿಗೆ ಡ್ರಗ್ಸ್ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿಯಿದೆ ಎಂದರು.
ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಡಾ.ಗಾಯತ್ರಿ ಎನ್ ಹಾಜರಿದ್ದರು. ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ.ನಾಗರತ್ನ ಎನ್.ರಾವ್ ಸ್ವಾಗತಿಸಿದರು. ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಸಂಯೋಜಕಿ ಡಾ.ಮೀನಾಕ್ಷಿ ಎಂ.ಎಂ ವಂದಿಸಿದರು. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಶಮಾ ಐ.ಎನ್.ಎಂ ಕಾರ್ಯಕ್ರಮ ನಿರೂಪಿಸಿದರು.
-------------
ಖಿನ್ನತೆ, ತಿರಸ್ಕಾರ, ಎಲ್ಲರಿಗಿಂತ ಬಲಶಾಲಿಯಾಗಬೇಕೆಂಬ ಭ್ರಮೆ ಹೀಗೆ ವಿವಿಧ ಕಾರಣಗಳಿಗೆ ಕೆಲವರು ಮಾದಕ ದ್ರವ್ಯ ಸೇವಿಸುತ್ತಾರೆ. ದ್ರವ್ಯ ವ್ಯಸನ ತಮ್ಮ ಅರಿವಿಗೆ ಬರುವ ಮೊದಲೇ ಅದರ ದಾಸರಾಗಿ ಬಿಡುತ್ತಾರೆ. ಮಾದಕ ವ್ಯಸನಿ, ಕ್ಷಣಿಕ ಸುಖಕ್ಕಾಗಿ ಏನು ಮಾಡಲೂ ಹೇಸುವುದಿಲ್ಲ. ತಾವೂ ನಾಶವಾಗುವುದಲ್ಲದೆ ಸಮಾಜಕ್ಕೂ ಅಪಾಯಕಾರಿಯಾಗುತ್ತಾರೆ.
ಇರ್ಫಾ ಆಯೆಷಾ,ರೋಶನಿ ನಿಲಯ ಅಪರಾಧಶಾಸ್ತ್ರ ವಿಭಾಗದ ಉಪನ್ಯಾಸಕಿ