ಖಾನಾಪುರ: ತಾಲೂಕಿನ ಮಂತುರ್ಗಾ ಗ್ರಾಮದ ಬಳಿ ಇರುವ ಅಲಾತ್ರಿ ಹಳ್ಳದಲ್ಲಿ ಮುಳುಗಿ ಬೆಳಗಾವಿ ನಗರದ ಯುವಕನೋರ್ವ ಭಾನುವಾರ ಮೃತಪಟ್ಟಿದ್ದಾನೆ. ಬೆಳಗಾವಿಯ ಯಳ್ಳೂರ ರಸ್ತೆಯಲ್ಲಿರುವ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ಎಕ್ಸ್-ರೇ ಟೆಕ್ನೀಶಿಯನ್, ವಡಗಾಂವ ನಿವಾಸಿ ಮಂಜುನಾಥ ಮಲ್ಲಿಕಾರ್ಜುನ ಸಾತಪುತೆ (28) ಮೃತಪಟ್ಟ ಯುವಕ.
ಮಂಜುನಾಥ ತನ್ನ ಏಳೆಂಟು ಗೆಳೆಯರೊಂದಿಗೆ ವಾರಾಂತ್ಯದ ಮೋಜಿಗಾಗಿ ಭಾನುವಾರ ಮಧ್ಯಾಹ್ನ ಅಲಾತ್ರಿ ಹಳ್ಳದ ಬಳಿ ಆಗಮಿಸಿದ್ದರು. ಮದ್ಯ ಸೇವಿಸಿದ ಗೆಳೆಯರೆಲ್ಲರೂ ಈಜಲು ನೀರಿಗೆ ಇಳಿದಿದ್ದರು. ಮಂಜುನಾಥ ಈಜುತ್ತಿದ್ದಾಗ ಸೆಳವಿಗೆ ಸಿಲುಕಿದ್ದನ್ನು ಗಮನಿಸಿದ ಸ್ಥಳೀಯರು ಈ ವಿಷಯವನ್ನು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದರು.
ಘಟನಾ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕದಳದ ಸಿಬ್ಬಂದಿ ನೀರಿನಲ್ಲಿ ಮುಳುಗಿದ್ದ ಮಂಜುನಾಥನನ್ನು ಮೇಲೆತ್ತಿ ಚಿಕಿತ್ಸೆಗಾಗಿ ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ.15ರ ದೀಪಾವಳಿ ಹಬ್ಬದ ದಿನ ಪಟ್ಟಣದ ಇಬ್ಬರು ಯುವಕರು ಇದೇ ಹಳ್ಳದಲ್ಲಿ ಮುಳುಗಿ ಮೃತಪಟ್ಟಿದ್ದರು.