ಮಂಡ್ಯ: ಬರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ ಮತ್ತು ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಜಿಲ್ಲೆಯಲ್ಲಿ ನಡೆಸಿದ ಬರ ಅಧ್ಯಯನದ ವರದಿಯನ್ನು ಬಿಡುಗಡೆಗೊಳಿಸಲಾಯಿತು. ಪ್ರಮುಖವಾಗಿ ಅಧಿಕಾರಿಗಳ ಕೊಟ್ಟಿರುವ ಮಾಹಿತಿ ನೈಜವಾಗಿಲ್ಲ. ಯಾರೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಜತೆಗೆ ನಷ್ಟದ ಪರಿಹಾರ ಪಡೆಯಲು ಶೇ.40ರಷ್ಟು ಕಮಿಷನ್ ಕೊಡಬೇಕೆನ್ನುವ ಅಂಶವನ್ನು ಪ್ರಸ್ತಾಪಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ವರದಿಯನ್ನು ಬಹಿರಂಗಗೊಳಿಸಿದ ದಳಪತಿಗಳು, ಕೃಷಿ ಇಲಾಖೆ ನೀಡಿರುವ ಬೆಳೆಗಳ ಸಾಧನೆ ಗಮನಿಸಿದರೆ ವರದಿ ಸರಿಯಾಗಿಲ್ಲ ಎನ್ನುವುದು ಅಧ್ಯಯನದ ವೇಳೆ ಗೊತ್ತಾಯಿತು. ರೈತರು ಖರ್ಚು ಮಾಡಿರುವ ಹಣವೂ ಕೂಡ ಸರ್ಕಾರ ಕೊಡುವ ಪರಿಹಾರದಿಂದ ಸಿಗುವುದಿಲ್ಲ. ಒಟ್ಟಾರೆ ಅನ್ನದಾತರ ಸ್ಥಿತಿ ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬರಕ್ಕೆ ಸಂಬಂಧಿಸಿದಂತೆ ವಾಸ್ತವ ಸ್ಥಿತಿಯ ವರದಿಯನ್ನು ಜಿಲ್ಲಾಡಳಿತದ ಮೂಲಕ ರಾಜ್ಯಸರ್ಕಾರಕ್ಕೆ ಸಲ್ಲಿಸಲಾಗಿದೆ. ಅದನ್ನು ಸ್ವೀಕರಿಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಆದಾಗ್ಯೂ ರೈತರ ವಿಚಾರದಲ್ಲಿ ನಿರ್ಲಕ್ಷೃ ತೋರಿದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದಲ್ಲದೆ ಸಂಸತ್‌ನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ವಿಧಾನಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಸ್ತಾಪಿಸಲಿದ್ದಾರೆ ಎಂದು ತಿಳಿಸಿದರು.
ಅಧ್ಯಯನದಲ್ಲಿ ಕಂಡಿದ್ದೇನು?: ಜಿಲ್ಲೆಯಲ್ಲಿ ಕ್ಷೇತ್ರಾವಾರು ನಡೆಸಿದ ಬರ ಅಧ್ಯಯನದ ವೇಳೆ ಕಂಡುಬಂದ ಮಾಹಿತಿಯನ್ನು ವರದಿಯಲ್ಲಿ ನೀಡಲಾಗಿದೆ. ಅದರಂತೆ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ಮದ್ದೂರು ಮತ್ತು ಮಳವಳ್ಳಿ ತಾಲೂಕಿನಲ್ಲಿ ಶೇ.50ರಷ್ಟು, ನಾಗಮಂಗಲದಲ್ಲಿ ಶೇ.75, ಶ್ರೀರಂಗಪಟ್ಟಣ, ಮೇಲುಕೋಟೆ ಮತ್ತು ಮಂಡ್ಯ ಕ್ಷೇತ್ರದಲ್ಲಿ ಶೇ.20ರಷ್ಟು ಖುಷ್ಕಿ ಜಮೀನು ಮಳೆಯನ್ನು ಆಶ್ರಯಿಸಿವೆ. ಈ ಭಾಗದ ಜನರು ಬೋರ್‌ವೆಲ್ ಮೂಲಕ ನೀರನ್ನು ಬಳಸಿಕೊಂಡು ಬೆಳೆ ಬೆಳೆಯುತ್ತಿದ್ದಾರೆ.
ರಾಜ್ಯಸರ್ಕಾರ ಸಮರ್ಪಕವಾಗಿ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡದ ಪರಿಣಾಮ ಬಿತ್ತನೆ ಮಾಡಿದ ಬೆಳೆ ನಾಶವಾಗಿದೆ. ಇನ್ನು ರೈತರು ಹೇಳುವ ಪ್ರಕಾರ ರಾತ್ರಿ ಹೊತ್ತು ಒಂದೆರೆಡು ಗಂಟೆ ಕೊಟ್ಟರೂ ಹೆಚ್ಚೆಂದು ತಿಳಿಸಿದರು. ಮಾತ್ರವಲ್ಲದೆ ಕಾಡುಪ್ರಾಣಿಗಳ ಭಯದಿಂದ ಹೆಚ್ಚಿನ ಜನರು ಜಮೀನಿಗೆ ಹೋಗಲು ಆಗದ ಪರಿಣಾಮ ರಾತ್ರಿ ಹೊತ್ತು ವಿದ್ಯುತ್ ಕೊಟ್ಟರೂ ಪ್ರಯೋಜನವಾಗಿಲ್ಲ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ ಮೊದಲ ವಾರದಿಂದ ಪಂಪ್‌ಸೆಟ್‌ಗೆ ದಿನಕ್ಕೆ ಏಳು ಗಂಟೆ ತ್ರೀ ಫೇಸ್ ಕೊಡುವುದಾಗಿ ತಿಳಿಸಿದ್ದರು. ಆದರೆ ಕಾಡಂಚಿನ ಗ್ರಾಮಕ್ಕೆ ಕನಿಷ್ಟ ಮೂರು ಗಂಟೆ ನಿರಂತರ ವಿದ್ಯುತ್ ನೀಡುವಂತೆ ಸಿಎಂಗೆ ಅರಣ್ಯ ಸಚಿವರು ಮನವಿ ಮಾಡಿರುವ ವರದಿ ನ.13ರಂದು ‘ವಿಜಯವಾಣಿ ಪತ್ರಿಕೆ’ಯಲ್ಲಿ ಪ್ರಕಟವಾಗಿದೆ. ಇದನ್ನು ಗಮನಿಸಿದರೆ ವಿದ್ಯುತ್ ಸಮಸ್ಯೆ ಬಗ್ಗೆ ರೈತರು ಹೇಳಿರುವುದು ಸತ್ಯ ಎನ್ನುವುದು ಗೊತ್ತಾಯಿತು. ಆದ್ದರಿಂದ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡದ ರಾಜ್ಯ/ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲವೆಂದು ರಾಜ್ಯಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಪರಿಹಾರ ಪಡೆಯಲು ಕಮಿಷನ್
ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಪರಿಹಾರ ಪಡೆಯಲು ಕಮಿಷನ್ ನೀಡಬೇಕೆನ್ನುವ ಅಂಶವನ್ನು ವರದಿಯನ್ನು ಪ್ರಸ್ತಾಪಿಸಲಾಗಿದೆ. ಅದರಂತೆ ಭತ್ತ ಮತ್ತು ಕಬ್ಬು ನಾಟಿಗೆ ಪ್ರತಿ ಎಕರೆಗೆ ತಗಲುವ ವೆಚ್ಚ 45 ಸಾವಿರ ರೂನಿಂದ ಹಿಡಿದು 50 ಸಾವಿರ ರೂ ಆಗುತ್ತದೆ. ರಾಗಿ, ಜೋಳ, ಹತ್ತಿ, ತೊಗರಿ, ದ್ವಿದಳ ಧಾನ್ಯ, ತರಕಾರಿ ಸೇರಿದಂತೆ ಕೃಷಿಗೆ 20 ಸಾವಿರ ರೂನಿಂದ 30 ಸಾವಿರ ರೂ, ತೋಟಗಾರಿಕೆ ಬೆಳೆಗೆ 30 ಸಾವಿರ ರೂನಿಂದ 40 ಸಾವಿರ ರೂ ಖರ್ಚಾಗಿದೆ. ಎನ್‌ಡಿಆರ್‌ಎಫ್ ನಿಯಮದಂತೆ ನೀರಾವರಿ ಪ್ರದೇಶದ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ, ಮಳೆಯಾಶ್ರಿತ ಪ್ರದೇಶದ ಬೆಳೆಗೆ 13,600 ರೂ ನಿಗದಿ ಮಾಡಲಾಗಿದೆ. ಈ ಪರಿಹಾರವನ್ನು ಪಡೆಯಲು ಅಧಿಕಾರಿಗಳಿಗೆ ಮಾಹಿತಿ ಹಾಗೂ ಶೇ.40ರಷ್ಟು ಕಮಿಷನ್ ಕಳೆದು ಬರುವ ಹಣ ಪಡೆಯುವುದೇ ಬೇಡವೆಂದು ರೈತರ ಬೇಸರದ ನುಡಿಗಳಾಗಿವೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.