ವಿಜಯಪುರ ಜಿಪಂ ಸಭಾಂಗಣದಲ್ಲಿ ಸಚಿವ ಎಂ.ಬಿ. ಪಾಟೀಲರು ಬರ ನಿರ್ವಹಣೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.  
ಜಿಲ್ಲೆ

ಬರ ನಿರ್ವಹಣೆಯ ಪ್ರಗತಿ ಪರಿಶೀಲನೆ ಸಭೆ, ಅಧಿಕಾರಿಗಳಿಗೆ ಸಚಿವ ಡಾ.ಎಂ.ಬಿ. ಪಾಟೀಲ ಸೂಚನೆ, ಜನರ ಆಶೋತ್ತರಗಳಿಗೆ ತ್ವರಿತವಾಗಿ ಸ್ಪಂದಿಸಿ

ವಿಜಯಪುರ: ಜನರ ಆಶೋತ್ತರಗಳಿಗೆ ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆ, ಕುಡಿಯುವ ನೀರಿನ ಪೂರೈಕೆ ಕುರಿತು ಸೋಮವಾರ ಪರಿಶೀಲನೆ ಸಭೆ ನಡೆಸಿದ ಅವರು, ಜಿಲ್ಲೆಯ 12 ತಾಲೂಕುಗಳನ್ನು ತೀವ್ರ ಬರ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ತಿಕೋಟಾ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎನ್‌ಡಿ ಆರ್‌ಎಫ್ ಮಾನದಂಡದಿಂದಾಗಿ ಬರ ಎಂದು ಘೋಷಣೆ ಆಗದೇ ಇರುವುದರಿಂದ ಇತರ ಮಾನದಂಡಗಳನ್ನು ಪರಿಗಣಿಸಿ ತಿಕೋಟಾ ತಾಲೂಕನ್ನು ಬರ ಘೋಷಣೆ ಮಾಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂಬರುವ ದಿನಗಳಲ್ಲಿ ಬರ ಘೋಷಣೆಯಾಗಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಡಿ.15ರಿಂದ ಜೂನ್ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಬಹುದಾಗಿರುವುದರಿಂದ ಈಗಿನಿಂದಲೇ ಕುಡಿಯುವ ನೀರಿಗಾಗಿ ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡು, ಆದ್ಯಾನುಸಾರ ಕ್ರಮ ವಹಿಸಲು ಸೂಚಿಸಿದರು.

ಟ್ಯಾಂಕರ್ ನೀರು ಪೂರೈಕೆ

ಜಿಲ್ಲೆಯಲ್ಲಿ ಒಟ್ಟು ಮೂರು ಗ್ರಾಮಗಳಿಗೆ ಪ್ರತಿ ದಿನ 5 ಟ್ಯಾಂಕರ್ 6 ಟ್ರಿಪ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಖಾಸಗಿ ಬೋರವೆಲ್‌ಗಳನ್ನು ಗುರುತಿಸಿಕೊಳ್ಳಬೇಕು. ನೀರಿನ ಇಳುವರಿ ನೋಡಿಕೊಂಡು ಅವಶ್ಯಕತೆಯನುಸಾರ ಬೋರವೆಲ್ ಕೊರೆಯಿಸಲು ಕ್ರಮ ವಹಿಸಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದರೆ ಟ್ಯಾಂಕರ್ ಮೂಲಕ ನೀರು ಸರಬರಾಜುವಿಗೆ ಈಗಾಗಲೇ ರಚನೆೆಯಾಗಿರುವ ಟಾಸ್ಕ್‌ಫೋರ್ಸ್ ಮೂಲಕ ತೀರ್ಮಾನಿಸಿ ಕ್ರಮ ಕೈಗೊಳ್ಳಬೇಕು. ಜಾನುವಾರುಗಳಿಗೆ ಡಿ.10ರ ವರೆಗೆ ಯಾವುದೇ ಮೇವಿನ ಕೊರತೆ ಇರುವುದಿಲ್ಲ. ಮೇವಿನ ಕೊರತೆಯಾಗದಂತೆ ಹಾಗೂ ಜಾನುವಾರುವಿಗೆ ಲಸಿಕೆ ನೀಡಲು ಸಾಕಷ್ಟು ದಾಸ್ತಾನಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಉದ್ಯೋಗ ಖಾತ್ರಿ ಯೋಜನೆ

ಬೆಳೆ ಹಾನಿ-ವಿದ್ಯುತ್ ಪೂರೈಕೆ

ಗುಳೆ ತಪ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗವಕಾಶ ಹೆಚ್ಚಿಸಬೇಕು. ಹೆಚ್ಚೆಚ್ಚು ಮಾನವ ದಿನಗಳನ್ನು ಸೃಜಿಸಬೇಕು. ಕಷ್ಟ ಕಾಲದಲ್ಲಿ ಜನಸಾಮಾನ್ಯರ ಸಹಾಯಕ್ಕೆ ಅಧಿಕಾರಿಗಳು ಧಾವಿಸಬೇಕು. ನರೇಗಾದಡಿ ಉದ್ಯೋಗ ನೀಡಲು ನಿರಾಕರಿಸಬಾರದು. ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬರ ಪರಿಸ್ಥಿತಿಯ ಕುರಿತು ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಎಲ್ಲ ಅಧಿಕಾರಿಗಳು ದೂರವಾಣಿ ಕರೆಗಳಿಗೆ ಸ್ಪಂದಿಸಬೇಕು. ಕುಡಿಯುವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯವಹಿಸದೇ ಗಂಭೀರವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಹಾಗೂ ತೋಟಗಾರಿಕೆಯ 492247 ಲಕ್ಷ ಹೆಕ್ಟರ್‌ನಷ್ಟು ಪ್ರದೇಶ ಬೆಳೆ ಹಾನಿಯಾಗಿದ್ದು ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ 6 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದ್ದು, ಆದಾಗ್ಯೂ ನೀರಾವರಿ ಪಂಪ್‌ಸೆಟ್‌ಗಳಿಗೆ 3 ಬ್ಯಾಚ್‌ಗಳಲ್ಲಿ ಐದು ಗಂಟೆ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮವಹಿಸಲಾಗಿದೆ. ಕೆಲವು ವಿತರಣಾ ಕೇಂದ್ರಗಳಲ್ಲಿ ಸಾಮರ್ಥ್ಯ ಕಡಿಮೆ ಇರುವುದರಿಂದ 2 ವಿಭಾಗಗಳಲ್ಲಿ ವಿಂಗಡಿಸಿ ಹಗಲು ವೇಳೆಯಲ್ಲಿ 3ಗಂಟೆ ಹಾಗೂ ರಾತ್ರಿ ವೇಳೆಯಲ್ಲಿ 2 ಗಂಟೆ ಸೇರಿದಂತೆ ನಿರಂತರವಾಗಿ 5 ಗಂಟೆ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗಿದೆ. ನ. 1ರಿಂದ ಜಿಲ್ಲೆಯಲ್ಲಿ ಕಾರ್ಖಾನೆೆಗಳು ಕಬ್ಬು ನುರಿಸುವ ಹಂಗಾಮು ಪ್ರಾರಂಭದಿಂದ, 178 ಮೆ.ವ್ಯಾ. ವಿದ್ಯುತ್ ಜಿಲ್ಲೆಯಿಂದ ಉತ್ಪಾದನೆಯಾಗುವ ವಿದ್ಯುತ್ ಬಳಕೆಯಿಂದ ವಿದ್ಯುತ್ ಬೇಡಿಕೆ ಕಡಿಮೆಯಾಗಲಿದೆ. 2 ಲಕ್ಷ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರೋಷನ್ ಸಭೆಗೆ ಮಾಹಿತಿ ನೀಡಿದರು.

ಮಳೆ ವಿವರ

ಜಿಲ್ಲೆಯಲ್ಲಿ 2023 ಜನವರಿಯಿಂದ ಅ. 14ರ ವರೆಗೆ ವಾಡಿಕೆ ಮಳೆ 528 ಮಿಮೀ ಇದ್ದು 390 ಮಿಮೀ ಮಳೆಯಾಗಿದ್ದು 26 ಪ್ರತಿಶತ ಕಡಿಮೆಯಾಗಿದೆ. 736794 ಹೆಕ್ಟರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. 642827 ಹೆಕ್ಟರ್ ಪ್ರದೇಶದಲ್ಲಿ ಶೇ.87.25ರಷ್ಟು ಬಿತ್ತನೆಯಾಗಿರುತ್ತದೆ. ಇದರಲ್ಲಿ ಜಿಲ್ಲೆಯಲ್ಲಿ ತೊಗರಿ ಹೆಚ್ಚು 366407 ಹೆಕ್ಟರ್ ಬಿತ್ತನೆಯಾಗಿದೆ. ಮೆಕ್ಕೆಜೋಳ 95833, ಸಜ್ಜೆ 9569, ಸೂರ್ಯಕಾಂತಿ 2003, ಹತ್ತಿ 53676 ಬಿತ್ತನೆಯಾಗಿದೆ. 26736 ಕ್ವಿಂಟಲ್ ಬಿತ್ತನೆ ಬೀಜ ಹಾಗೂ 44545 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇರುತ್ತದೆ. ಸದ್ಯ ಕೊರತೆ ಇರುವುದಿಲ್ಲ ಎಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಬೊಮ್ಮಣಜೋಗಿ, ಪುರದಾಳ ಕೆರೆಗೆ ನೀರು ಒದಗಿಸುವ ಮೂಲಕ ಅನುಕೂಲ ಕಲ್ಪಿಸಿಕೊಡಬೇಕೆಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತಿಗೆ ಸ್ಪಂದಿಸಿದ ಸಚಿವರು, ಕೊನೆಯ ಹಂತದವರೆಗೆ ನೀರು ಹರಿಸಲು ಕ್ರಮ ವಹಿಸಬೇಕು ಹಾಗೂ ಕಾಲುವೆ ನೀರು ಪೋಲಾಗದಂತೆ ನೋಡಿಕೊಳ್ಳಲು ನಿರಂತರ ನಿಗಾ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯುತ್, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಬಿತ್ತನೆ ಹಾಗೂ ಬೆಳೆ ಹಾನಿ ವಿವರ, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿರುವ ನೀರಿನ ಸಂಗ್ರಹ ಹಿಂಗಾರು ಹಂಗಾಮಿನಲ್ಲಿ ರಸಗೊಬ್ಬರ ಬೇಡಿಕೆ, ನರೆಗಾ ಯೋಜನೆ, ಉದ್ಯೋಗ ನೀಡುವ ಕುರಿತಾಗಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಶಾಸಕರಾದ ವಿಠಲ ಕಟಕದೊಂಡ, ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್‌ಪಿ ಋಷಿಕೇಶ ಭಗವಾನ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.