ಜಿಲ್ಲೆ

ರಂಗಾಯಣಕ್ಕೆ ಬರಗಾಲ ಗ್ಯಾರಂಟಿ

Haveri - Desk - Ganapati Bhat

ಧಾರವಾಡ: ವೀರರಾಣಿ ಕಿತ್ತೂರು ಚನ್ನಮ್ಮ ಬೃಹತ್ ನಾಟಕ ತಯಾರಿ ಮತ್ತು ಪ್ರದರ್ಶನದ ಮೂಲಕ ಧಾರವಾಡ ರಂಗಾಯಣ ರಾಜ್ಯದಲ್ಲೆಡೆ ಸುದ್ದಿಯಾಗಿತ್ತು. ನಾಟಕೋತ್ಸವ, ರಂಗ ಚಟುವಟಿಕೆಗಳಿಗೆ ವೇದಿಕೆಯಾಗುತ್ತಿದ್ದ ರಂಗಾಯಣ ಅನುದಾನದ ಕೊರತೆ ಎದುರಿಸುತ್ತಿದ್ದು, ರಂಗಸಜ್ಜಿಕೆಯ ದೀಪಗಳು ಬೆಳಗುತ್ತಿಲ್ಲ. ತಾಳ- ತಂಬೂರಿ, ತಬಲಾ, ಹಿಮ್ಮೆಳದ ಸದ್ದಡಗಿದೆ.

ಚಿಣ್ಣರ ಮೇಳ, ಮಕ್ಕಳ ಶಿಬಿರ, ರಂಗ ತರಬೇತಿ, ಯುವ ರಂಗೋತ್ಸವ, ರಂಗಧ್ವನಿ, ನವರಾತ್ರಿ ರಂಗೋತ್ಸವ, ರಾಷ್ಟ್ರೀಯ ರಂಗಸಂಗೀತ, ಬೇಸಿಗೆ ಶಿಬಿರ, ನಾಟಕೋತ್ಸವದಂಥ ರಂಗ ಚಟುವಟಿಕೆಗಳಿಂದ ಹೆಸರುವಾಸಿಯಾಗಿರುವ ಧಾರವಾಡ ರಂಗಾಯಣ ಈಗ ಅನುದಾನದ ಕೊರತೆ ಎದುರಿಸುತ್ತಿದೆ. ರಂಗ ಚಟುವಟಿಕೆಗಳು ನಿಂತುಹೋಗಿದ್ದು, ರಂಗಾಯಣದ ಆವರಣ ಭಣಗುಡುತ್ತಿದೆ. ರಂಗಭೂಮಿಯ ಹಿರಿಯ ಚೇತನ ಬಿ.ವಿ. ಕಾರಂತರ ಕನಸಿನ ಕೂಸು ರಂಗಾಯಣ. ಮೊಟ್ಟ ಮೊದಲಿಗೆ ಆರಂಭವಾದ ಮೈಸೂರು ರಂಗಾಯಣದ ಭಾಗವಾಗಿ ಧಾರವಾಡ ರಂಗಾಯಣ 2006ರಲ್ಲಿ ಆರಂಭಗೊಂಡರೂ 2011ರಲ್ಲಿ ಸ್ವಾಯತ್ತತೆ ಪಡೆದಿತ್ತು. ರಂಗಭೂಮಿಯ ಮತ್ತೋರ್ವ ದಿಗ್ಗಜ ಏಣಗಿ ನಟರಾಜ ಅವರು ಧಾರವಾಡ ರಂಗಾಯಣದ ಮೊದಲ ನಿರ್ದೇಶಕರಾಗಿದ್ದರು. ರಂಗಭೂಮಿಯ ದಿಗ್ಗಜರು ಇತ್ತ ನೋಡುವಂಥ ನಾಟಕಗಳು ಇಲ್ಲಿ ಸಿದ್ಧಗೊಂಡು ನಾಡಿನಾದ್ಯಂತ ಪ್ರದರ್ಶನ ಕಂಡಿರುವುದು ವಿಶೇಷ.

ನಾವಿಕನಿಲ್ಲದ ಹಡಗು: ರಮೇಶ ಪರವೀನಾಯ್ಕರ್ ನಿರ್ದೇಶಕರಾಗಿದ್ದಾಗ ಕಿತ್ತೂರು ರಾಣಿ ಚನ್ನಮ್ಮ ಜೀವನಾಧಾರಿತ ಬೃಹತ್ ನಾಟಕ ಜನಮನ ಸೆಳೆದಿತ್ತು. ನಾಡಿನ ಹಲವೆಡೆ ನಾಟಕ ಪ್ರದರ್ಶನಗೊಂಡು ಧಾರವಾಡ ರಂಗಾಯಣದ ಕೀರ್ತಿಯನ್ನು ಹೆಚ್ಚಿಸಿತ್ತು. 4 ತಿಂಗಳ ಹಿಂದೆ ಅವರ ಅಧಿಕಾರವಧಿ ಮುಕ್ತಾಯಗೊಂಡಿದ್ದು, ಹೊಸ ನಿರ್ದೇಶಕರ ನೇಮಕವಾಗಿಲ್ಲ. ಹೀಗಾಗಿ ರಂಗಾಯಣ ನಾವಿಕನಿಲ್ಲದ ಹಡಗಿನಂತಾಗಿದ್ದು, ಆಡಳಿತಾಧಿಕಾರಿಯ ಅಧಿಕಾರ ನಡೆಯುತ್ತಿದೆ.

ರಂಗಾಯಣ ಮರೆತ ಸರ್ಕಾರ: ರಾಜ್ಯದ ರಂಗಾಯಣಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ದಶಕಗಟ್ಟಲೆ ಕ್ರಿಯಾಶೀಲತೆಯಿಂದ ಹೆಸರು ಮಾಡಿದ್ದ ಧಾರವಾಡ ರಂಗಾಯಣಕ್ಕೆ ಆರಂಭದಲ್ಲಿ ವಾರ್ಷಿಕ 1 ಕೋಟಿ ರೂ. ಅನುದಾನ ಬರುತ್ತಿತ್ತು. ಕ್ರಮೇಣ 75 ಲಕ್ಷ, 50 ಲಕ್ಷಕ್ಕೆ ಇಳಿಕೆಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಂಗಾಯಣವನ್ನು ಸಂಪೂರ್ಣ ಮರೆತಿದೆ. 5 ತಿಂಗಳಿಂದ ಅನುದಾನ ಬಿಡುಗಡೆ ಮಾಡದಿರುವುದರಿಂದ ಕಲಾವಿದರು, ರಂಗಾಯಣದ ಸಿಬ್ಬಂದಿಗೆ ವೇತನವಿಲ್ಲ ಇಲ್ಲವಾಗಿದೆ.

ಸರ್ಕಾರಕ್ಕೆ ಒತ್ತಾಯ

ರಾಜ್ಯದಲ್ಲಿ 6 ರಂಗಾಯಣಗಳಿದ್ದು, ರಂಗಭೂಮಿಗೆ ನೀಡುವ ಅನುದಾನ ಪರಿಮಿತ. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ಬೇರೆ ಬೇರೆ ಸರ್ಕಾರಗಳು ಉದಾರವಾಗಿ ಅನುದಾನ ನೀಡುತ್ತ ಬಂದಿವೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದ್ದು, ಇತ್ತೀಚೆಗೆ ಇಲಾಖೆ ಸಚಿವರು ಧಾರವಾಡಕ್ಕೆ ಭೇಟಿ ನೀಡಿದ್ದರು. ಹಿಂದಿನ ಅವಧಿಯಲ್ಲಿ ಬಿಡುಗಡೆಯಾಗಿದ್ದ ಅನುದಾನ ಸದ್ಬಳಕೆಯಾಗಿಲ್ಲ, ಅದರ ಬಗ್ಗೆ ವಿಸõತ ತನಿಖೆ ನಡೆಯಬೇಕು ಎಂಬ ಕೂಗು ಇದೆ. ಅನುದಾನ ವಿಳಂಬಕ್ಕೆ ಇದೂ ಒಂದು ಕಾರಣ ಇರಬಹುದು. ಇನ್ನು ಮುಂದಾದರೂ ಸರ್ಕಾರದ ಅನುದಾನ ಸದ್ಬಳಕೆಯಾಗಬೇಕು. ವೃತ್ತಿಪರ, ತಜ್ಞ, ಕ್ರಿಯಾಶೀಲ ನಿರ್ದೇಶಕ ನೇಮಕ ಆಗಬೇಕು, ವೃತ್ತಿಪರ ತರಬೇತಿ ನಡೆಯಬೇಕು ಎಂದು ರಂಗ ನಿರ್ದೇಶಕರು, ನಾಟಕಕಾರರು, ಹಿರಿಯ ಕಲಾವಿದರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸರ್ಕಾರಕ್ಕೆ 1.50 ಕೋಟಿ ರೂಪಾಯಿ ಮೊತ್ತದ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಅನುದಾನ ಬಾರದಿರುವುದರಿಂದ ರಂಗಚಟುವಟಿಕೆಗಳು ನಿಂತಿವೆ. ಅನುದಾನ ಹಂಚಿಕೆ ಹಾಗೂ ನೂತನ ನಿರ್ದೇಶಕರ ನೇಮಕವಾಗುವ ನಿರೀಕ್ಷೆಯಲ್ಲಿದ್ದೇವೆ. | ಶಶಿಕಲಾ ಹುಡೇದ, ರಂಗಾಯಣ ಆಡಳಿತಾಧಿಕಾರಿ