ದೇವದುರ್ಗ: ರಾಜ್ಯ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ಬರಪೀಡಿತ 170ತಾಲೂಕುಗಳಲ್ಲಿ ದೇವದುರ್ಗ ತಾಲೂಕು ಹೆಸರು ಕೈಬಿಟ್ಟಿರುವುದನ್ನು ಖಂಡಿಸಿ ಇಲ್ಲಿನ ಮಿನಿವಿಧಾನಸೌಧ ಮುಂದೆ ಕರ್ನಾಟಕ ರೈತ ಸಂಘ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಮನವಿ ಸಲ್ಲಿಸಿತು.
ದೇವದುರ್ಗ ತಾಲೂಕು ಏಷ್ಯಾ ಖಂಡದಲ್ಲೇ ಅತ್ಯಂತ ಹಿಂದುಳಿದಿದೆ.. ನಾರಾಯಣಪುರ ಬಲದಂಡೆ ನಾಲೆ ಜಾರಿಗೊಳಿಸಿದರೂ ಈಡಿ ತಾಲೂಕು ನೀರಾವರಿ ವ್ಯಾಪ್ತಿಗೆ ಒಳಪಟ್ಟಿಲ್ಲ. ಅರಕೇರಾ ಹಾಗೂ ಗಬ್ಬೂರು ಹೋಬಳಿಯ ಹಲವು ಹಳ್ಳಿಗಳು ನೀರು ಸಿಗದೆ ಮಳೆ ಆಶ್ರಯ ಪಡೆದಿವೆ. ತಾಲೂಕಿನಲ್ಲಿ ಎಲ್ಲಿಯೂ ಸೂಕ್ತ ಮಳೆಯಾಗದೆ ಖುಷ್ಕಿ ಆಧಾರಿತ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ನಾರಾಯಣಪುರ ಬಲದಂಡೆ ನಾಲೆಗೆ ನೀರು ಬಿಟ್ಟರೂ 10ದಿನ ವಾರಬಂದಿ ಪದ್ಧತಿ ಹಾಕಿರುವ ಕಾರಣ ಕೊನೇ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಕೇವಲ 14ದಿನ ಮಾತ್ರ ನೀರು ಹರಿಸಲಾಗುತ್ತಿದೆ. ಇದರಿಂದ ಭತ್ತ, ತೊಗರಿ, ಮೆಣಸಿನಕಾಯಿ, ಹತ್ತಿ ಸೇರಿ ಮುಂಗಾರು ಬೆಳೆಗಳು ಸಂಪೂರ್ಣ ಒಣಗಿವೆ. ತಾಲೂಕಿನ ರೈತರು ಇಷ್ಟೆಲ್ಲ ಸಂಕಷ್ಟ ಅನುಭವಿಸುತ್ತಿದ್ದರೂ ರಾಜ್ಯ ಸರ್ಕಾರ ದೇವದುರ್ಗ ತಾಲೂಕುಅನ್ನು ಬರಪಟ್ಟಿಯಿಂದ ಕೈಬಿಟ್ಟಿರುವುದು ತೀವ್ರ ಖಂಡನೀಯ. ಯಾವ ಆಧಾರದಲ್ಲಿ ಸಮೀಕ್ಷೆ ನಡೆಸಿದೆ ಎನ್ನುವುದೇ ತಿಳಿಯುತ್ತಿಲ್ಲ ಎಂದು ದೂರಿದರು.
ಇದನ್ನೂ ಓದಿ: ಜಲಜೀವನ್ ಮಿಷನ್ ಯೋಜನೆಯಡಿ ಕುಡಿವ ನೀರು ಪೂರೈಕೆ
ಕೂಡಲೇ ರಾಜ್ಯ ಸರ್ಕಾರ ದೇವದುರ್ಗ ತಾಲೂಕನ್ನು ತೀವ್ರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು. ತಾಲೂಕಿನ ಎಲ್ಲ ರೈತರಿಗೂ ಸಮರ್ಪಕವಾಗಿ ವೈಜ್ಞಾನಿಕ ಪರಿಹಾರ ಕಲ್ಪಿಸಬೇಕು. ಎಲ್ಲ ಹಳ್ಳಿಗಳಿಗೂ ಸಮರ್ಪಕವಾಗಿ ಕುಡಿವ ನೀರು ಪೂರೈಕೆ ಮಾಡಬೇಕು. ಜಾನುವಾರುಗಳಿಗೆ ಮೇವು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಕೆ.ಗಿರಿಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ದುರುಗಣ್ಣ ಇರಬಗೇರಾ, ಶಫಿಕ್ ಪಾಷಾ, ಜಯಗೌಡ ಬಿ.ಆರ್.ಗುಂಡಾ, ರಮೇಶ, ಬಾಬು ಮಲದಕಲ್, ಶಿವಪ್ಪ ಸಮುದ್ರ, ಬಸವರಾಜ ಬಿ.ಆರ್.ಗುಂಡಾ ಇದ್ದರು.