ಬೆಳೆಹಾನಿ ಪರಿಹಾರಕ್ಕೆ ಒತ್ತಾಯಿಸಿ ಕುಕನೂರು ತಾಲೂಕಿನ ಮಂಗಳೂರು ನಾಡ ಕಚೇರಿ ಉಪ ತಹಸೀಲ್ದಾರ್ ಬಸವರಾಜ್ ಪಿ.ಕ್ಯಾತಗೇರಿಗೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹೋಬಳಿ ಘಟಕದ ಕಾರ್ಯಕರ್ತರು ಮನವಿ ಸಲ್ಲಿಸಿದರು. ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರಳಿ, ರಾಜ್ಯ ಯುವ ಘಟಕ ಅಧ್ಯಕ್ಷ ಎಸ್.ಡಿ.ಕರಿಗೌಡ, ಹೋಬಳಿ ಘಟಕದ ಅಧ್ಯಕ್ಷ ರವಿ ಶೆಲೂಡಿ, ಉಪಾಧ್ಯಕ್ಷ ಪಾಲಾಕ್ಷಗೌಡ ಕಿರ್ತಿಗೌಡ ಇದ್ದರು. 
ಜಿಲ್ಲೆ

ಸರ್ಕಾರ ಬರ ಘೋಷಣೆ ಮಾಡಿ, ಬೆಳೆಹಾನಿ ಪರಿಹಾರ ನೀಡಲಿ

ಕುಕನೂರು: ತೀವ್ರ ಬರಗಾಲದಿಂದ ಬೆಳೆ ಸಂಪೂರ್ಣ ಹಾಳಾಗಿದ್ದು, ಸರ್ಕಾರ ಕೂಡಲೇ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋಬಳಿ ಘಟಕದ ಕಾರ್ಯಕರ್ತರು ತಾಲೂಕಿನ ಮಂಗಳೂರು ಗ್ರಾಮದ ನಾಡ ಕಾರ್ಯಾಲಯದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ನಾಡಕಚೇರಿ ಉಪ ತಹಸೀಲ್ದಾರ್ ಬಸವರಾಜ್ ಪಿ.ಕ್ಯಾತಗೇರಿಗೆ ಮನವಿ ಸಲ್ಲಿಸಿದರು.

ಕುಕನೂರು ತಾಲೂಕಿನ ಮಂಗಳೂರು ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮುಂಗಾರು ಮಳೆ ಕೊರತೆಯಿಂದ ಬಿತ್ತಿದ ಬೀಜಗಳು ಮೊಳಕೆಯೊಡೆದು, ಸಂಪೂರ್ಣ ಒಣಗಿ ಹೋಗಿವೆ. ತೀವ್ರ ಬರ ಆವರಿಸಿದ್ದು, ಸಾಲ ಮಾಡಿ ಬೀಜ-ಗೊಬ್ಬರ ಹಾಕಿ ಬೆಳೆ ಬರಲಾರದೆ ತುಂಬಾ ಸಂಕಷ್ಟ ಎದುರಿಸಬೇಕಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ರೈತರ ಬದುಕು ಚಿಂತಾಜನಕವಾಗಿದ್ದು, ಇದುವರೆಗೂ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ. ಕೂಡಲೇ ತಹಸೀಲ್ದಾರ್ ಅವರು ಬೆಳೆ ಪರಿಶೀಲಿಸಿ, ವರದಿ ತಯಾರಿಸಿ, ಬರ ಘೋಷಣೆ ಮಾಡಲು ಶಿಫಾರಸು ಮಾಡಬೇಕು. ಸರ್ಕಾರಕ್ಕೆ ಇಲ್ಲಿನ ಬರ ಪರಿಸ್ಥಿತಿಯ ವರದಿಯನ್ನು ಕೂಡಲೇ ಸಲ್ಲಿಸಲು ಕ್ರಮಕೈಗೊಳ್ಳಬೇಕು. ಕುಕನೂರು ತಾಲೂಕನ್ನು ಬರಪಿಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿದರು.

ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರಳಿ, ರಾಜ್ಯ ಯುವ ಘಟಕ ಅಧ್ಯಕ್ಷ ಎಸ್.ಡಿ.ಕರಿಗೌಡ, ಹೋಬಳಿ ಘಟಕದ ಅಧ್ಯಕ್ಷ ರವಿ ಶೆಲೂಡಿ, ಉಪಾಧ್ಯಕ್ಷ ಪಾಲಾಕ್ಷಗೌಡ ಕಿರ್ತಿಗೌಡ, ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ, ಬಸಪ್ಪ ಮಂಡಲಗೇರಿ ಇತರರಿದ್ದರು.