ಜಿಲ್ಲೆ

ಬರಪೀಡಿತ ಪ್ರದೇಶವನ್ನಾಗಿ ಘೋಷಿಸಲು ವಿವಿಧ ಸಂಘ ಸಂಸ್ಥೆಗಳ ಒತ್ತಾಯ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಮುಂಗಾರು ಹಂಗಾಮಿನ ಮಳೆ, ಬೆಳೆ ಪರಿಸ್ಥಿತಿಯನ್ನು ಆವಲೋಕಿಸಿ, ಬರಪೀಡಿತ ಪ್ರದೇಶವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಸಂಘ ಸಂಸ್ಥೆಗಳು ತೀರ್ಮಾನ ಕೈಗೊಂಡಿವೆ.
ಚಿಕ್ಕಬಳ್ಳಾಪುರ ನಗರದಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೈಗೊಂಡಿದ್ದ ಕೃಷಿಕ ಸಮಾಜದ ಕಾರ್ಯಕಾರಿಣಿ ಸಭೆಯಲ್ಲಿ ಬರ ಸ್ಥಿತಿ, ನಿರೀಕ್ಷೆಯ ನೆರವಿನ ಬಗ್ಗೆ ಚರ್ಚಿಸಲಾಯಿತು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಪಾಲನೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಇಲಾಖೆಯ ಯೋಜನೆಗಳು ಮತ್ತು ತಾಂತ್ರಿಕ ವಿಚಾರಗಳನ್ನು ಮಂಡಿಸಿದರು.
ಕೃಷಿಕ ಸಮಾಜದ ಅಧ್ಯಕ್ಷ ಎಸ್.ಶ್ರೀನಿವಾಸ್ ಮಾತನಾಡಿ, ಈ ಭಾಗದಲ್ಲಿ ಮಳೆಯ ಅಭಾವದಿಂದ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್.ನಾರಾಯಣಸ್ವಾಮಿ, ತಾಲೂಕು ಉಪಾಧ್ಯಕ್ಷ ಶ್ರೀನಿವಾಸಪ್ಪ, ಖಜಾಂಚಿ ಎಂ.ಎನ್.ಶ್ರೀನಿವಾಸ್ ಗೌಡ, ಪ್ರಧಾನ ಕಾರ್ಯದರ್ಶಿ ಕೆ.ವಿ.ಚಂದ್ರಪ್ಪ ಮತ್ತಿತರರು ಇದ್ದರು.

* ಬರಪೀಡಿತ ಜಿಲ್ಲೆ ಘೋಷಿಸಿ
ಮಳೆಯ ಅಭಾವಕ್ಕೆ ತತ್ತರಿಸುತ್ತಿರುವ ಚಿಕ್ಕಬಳ್ಳಾಪುರವನ್ನು ಬರಪೀಡಿತ ಜಿಲ್ಲೆ ಎಂಬುದಾಗಿ ಘೋಷಿಸಲು ಸಿಪಿಎಂ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಪ್ರಸಕ್ತ ಸಾಲಿನ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆ ಬಿದ್ದಿದೆ. ಇದರಿಂದ ಕೃಷಿ ಜಮೀನುಗಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಬೆಳೆ ಒಣಗಿ ಹೋಗಿದೆ. ಸಾಲ ಮಾಡಿ, ವ್ಯವಸಾಯ ಕೈಗೊಳ್ಳುತ್ತಿದ್ದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಜಿಲ್ಲಾ ಸಿಪಿಎಂ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು.                                                                                                         ಕೊಳವೆ ಬಾವಿಯಲ್ಲಿ ನೀರು ಬತ್ತು ಹೋಗಿರುವುದರಿಂದ ಬೆಳೆಗಳಿಗೆ ಹರಿಸಲು, ಜನರಿಗೆ ಕುಡಿಯುವ ನೀರು ಪೂರೈಸಲು ತೊಂದರೆಯಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿನ ಶೇ.80 ರಷ್ಟು ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟಿವೆ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸದಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವು ಕೂಡಲೇ ಮಳೆ ಅಭಾವ ಕಂಡಿರುವ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂಬುದಾಗಿ ಘೋಷಿಸಬೇಕು. ಬಿಪಿಎಲ್, ಎಪಿಎಲ್ ಪಡಿತರ ಚೀಟಿದಾರರ ಕುಟುಂಬಗಳಿಗೆ 10 ಕೆ.ಜಿ.ಅಕ್ಕಿ ನೀಡಬೇಕು. ಪಡಿತರ ಅಂಗಡಿಗಳ ಮೂಲಕ ಅಗತ್ಯ ವಸ್ತುಗಳನ್ನು ಸಬ್ಸಿಡಿಯಲ್ಲಿ ವಿತರಿಸಬೇಕು. ಬಡ ಮತ್ತು ಮಧ್ಯಮ ರೈತ, ಕೃಷಿ ಕೂಲಿಕಾರ ಸಾಲದ ಕಂತುಗಳನ್ನು ಕನಿಷ್ಠ 6 ತಿಂಗಳು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.