ಮಡಿಕೇರಿ:
ರಾಜ್ಯಕ್ಕೆ ನೀರು ಕೊಡುವ ಕೊಡಗು ಕೂಡ ಈ ಬಾರಿ ಬರಪೀಡಿತ ಪಟ್ಟಿಗೆ ಸೇರಿದೆ. ಬರಪರಿಹಾರ ಕಾಮಗಾರಿಗಳಿಗೆ ಎಸ್‌ಡಿಆರ್‌ಎಫ್ ಅಡಿಯಲ್ಲಿ ಸರ್ಕಾರದಿಂದ 7.5 ಕೋಟಿ ರೂ. ಬಿಡುಗಡೆ ಆಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಲಾಗಿದೆ. ಈ ಬಾರಿ ಕೊಡಗು ಜಿಲ್ಲೆಯ 5 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದ್ದು, ಬರ ನಿರ್ವಹಣೆಗೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ. ಅಧಿಕಾರಿಗಳು ಪ್ರಥಮ ಆದ್ಯತೆಯಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಶೇ.80 ರಷ್ಟು ಸರಾಸರಿ ಮಳೆಯಾಗಿದೆ. ಸೆಪ್ಟೆಂಬರ್‌ನಲ್ಲಿ ವಾಡಿಕೆ ಮಳೆ 223 ಮಿ.ಮೀ. ಆಗಿದ್ದು, ಈ ಬಾರಿ 251 ಮಿ.ಮೀ. ಮಳೆಯಾಗಿದೆ.
ಅಕ್ಟೋಬರ್‌ನಲ್ಲಿ ವಾಡಿಕೆ ಮಳೆ 197 ಮಿ.ಮೀ. ಆಗಿದ್ದು, ಈ ಬಾರಿ 166 ಮಿ.ಮೀ. ಮಳೆಯಾಗಿದೆ. ನವೆಂಬರ್‌ನಲ್ಲಿ ವಾಡಿಕೆ ಮಳೆ 74 ಮಿ,ಮೀ. ಆಗಿದ್ದು, ಈ ಬಾರಿ ನವೆಂಬರ್ ಮೊದಲ ವಾರದಲ್ಲಿ 45 ಮಿ.ಮೀ. ಮಳೆಯಾಗಿದೆ. ಆದರೂ ಅಂತರ್ಜಲ ಕಡಿಮೆಯಾಗಿದೆ. ತಾಲೂಕು ಹಂತದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿ ಬರ ನಿರ್ವಹಣೆಯನ್ನು ಎದುರಿಸಲು ಮುಂದಾಗುವAತೆ ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಶ್ವತ ಕುಡಿಯುವ ನೀರಿನ ಮೂಲಗಳನ್ನು ಗುರುತಿಸಿ, ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಶುದ್ಧ ಕುಡಿಯುವ ನೀರು ಪೂರೈಸುವುದು ಮತ್ತು ಜಾನುವಾರುಗಳಿಗೆ ಮೇವು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ಬಾರಿ ಮಳೆ ಕೊರತೆಯಿಂದಾಗಿ ಭತ್ತ ಮತ್ತು ಮುಸುಕಿನ ಜೋಳ ಪ್ರದೇಶ ಸುಮಾರು 9791 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಅಂದಾಜು 838 ಲಕ್ಷ ರೂ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಅಂದಾಜು ನಡೆಸಿದೆ. ಹಾಗಾಗಿ ಬರಪರಿಹಾರ ಸಂದರ್ಭ ಜಿಲ್ಲಾಡಳಿತದ ಆದ್ಯತೆ ಏನು ಎಂಬುದರ ಬಗ್ಗೆ ವಿಜಯವಾಣಿ ಓದುಗರು ಅಭಿಪ್ರಾಯ ಹಂಚಿಕೊAಡಿದ್ದಾರೆ.
ಕೊಡಗಿನಲ್ಲಿ ಕಾಫಿ, ಕಾಳುಮೆಣಸು, ಭತ್ತ ಪ್ರಮುಖ ಬೆಳೆಯಾಗಿದೆ. ಗ್ರಾಮೀಣ ಭಾಗದ ಬಹುತೇಕ ಕಡೆ ಕಾಫಿ, ಕಾಳುಮೆಣಸು ಫಸಲಿಗೆ ದೊಡ್ಡಮಟ್ಟದ ಹಾನಿಯಾಗಿದೆ. ಅದರಲ್ಲೂ ಸೋಮವಾರಪೇಟೆ ತಾಲೂಕಿನಲ್ಲಿ ಅರೇಬಿಕಾ ಕಾಫಿಗೆ ಹಾನಿಯಾಗಿದೆ. ಕಾಳುಮೆಣಸು ಫಸಲು ಕಟ್ಟಿಲ್ಲ. ಬೆಳೆಹಾನಿ ಸರ್ವೆ ವೈಜ್ಞಾನಿಕವಾಗಿರಬೇಕು.
ಸಿ.ಎಸ್. ಪೊನ್ನಪ್ಪ, ಕಾಫಿ ಬೆಳೆಗಾರ, ಚನ್ನಾಪುರ ಗ್ರಾಮ.
ಜೂನ್, ಜುಲೈ ತಿಂಗಳಲ್ಲಿ ಮಳೆ ಬೀಳದೆ ಕಾಫಿ, ಕಾಳುಮೆಣಸು ಫಸಲಿಗೆ ಹಾನಿಯಾಗಿದೆ. ಇಳುವರಿ ಕುಸಿತದಿಂದ ಕಾಫಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಕಾಫಿ ಬೆಳೆಗಾರರು ಸೇರಿದಂತೆ ಭತ್ತ ಕೃಷಿಕರಿಗೂ ಸೂಕ್ತ ಬೆಳೆಹಾನಿ ಪರಿಹಾರ ನೀಡಬೇಕು.
ಆಶಾ ಯೋಗೇಂದ್ರ, ಕಾಫಿ ಬೆಳೆಗಾರರು, ಸೊಮವಾರಪೇಟೆ.
ಈ ಬಾರಿ ಕೊಡಗಿಗೆ ಬರ ಬಂದಿರುವುದು ದುರಾದೃಷ್ಟಕರ. ಸÀರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು. ಮೊದಲು ರೈತರ ಏಳಿಗೆಗೆ ಗಮನ ಕೊಡಬೇಕು. ರೈತರಿಗೆ ಪೂರಕ ಯೋಜನೆಗಳನ್ನು ರೂಪಿಸಬೇಕು. ನೆಟ್ಟ ಬೆಳೆ ಹಾಳಾಗದ ರೀತಿಯಲ್ಲಿ ಗಮನ ಹರಿಸಬೇಕು. ಈಗ ಬಂದ ಅನುದಾನದ ಜೊತೆಗೆ ಮತ್ತಷ್ಟು ಅನುದಾನ ನೀಡುವಂತಾಗಬೇಕು.
ಕಾಡ್ಯಮಾಡ ಮನು ಸೋಮಯ್ಯ, ಜಿಲ್ಲಾ ರೈತ ಸಂಘ ಅಧ್ಯಕ್ಷ
ಮೊದಲ ಆದ್ಯತೆ ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಣೆಯಾಗಬೇಕು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಅಭಾವವಾಗಲಿದ್ದು ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು
ಶಿವಚಾಳಿಯಂಡ ಜಗದೀಶ್, ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ
ಎಸ್‌ಡಿಆರ್‌ಎಫ್ ಅಡಿಯಲ್ಲಿ ಸರ್ಕಾರದಿಂದ 7.5 ಕೋಟಿ ರೂ. ಬಿಡುಗಡೆಯಾಗಿದ್ದು ಈ ಹಣವನ್ನು ಕುಡಿಯುವ ನೀರಿಗೆ ಹಾಗೂ ಬೆಳೆ ಬೆಳೆದು ಸಂಕಷ್ಟದಲ್ಲಿರುವ ಎಲ್ಲಾ ರೈತರಿಗೆ ವಿತರಣೆ ಮಾಡಲಿ. ಕಾಫಿ ಬೆಳೆಗಾರರು ಸಹ ಸಂಕಷ್ಟದಲ್ಲಿದ್ದಾರೆ. ಇವರಿಗೂ ಸಹ ಪರಿಹಾರ ನೀಡಬೇಕು. ಕಾವೇರಿ ನೀರು ಬಳಕೆ ಮಾಡಿಕೊಳ್ಳುವ ಬೆಂಗಳೂರು ಬಿಬಿಎಂಪಿ ವಿಶೇಷ ಅನುದಾನವನ್ನು ಕೊಡಗಿಗೆ ನೀಡಲು ಮುಂದಾಗಬೇಕು.
ಶರತ್ ಶೇಖರ್, ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ, ಶನಿವಾರಸಂತೆ
ಮುಂಗಾರು ಮತ್ತು ಹಿಂಗಾರು ಮಳೆ ದುರ್ಬಲಗೊಂಡಿದ್ದರಿAದ ಕಾಫಿ, ಕಾಳುಮೆಣಸು, ಅಡಕೆ, ಏಲಕ್ಕಿ ಹಾಗೂ ಭತ್ತದ ಬೆಳೆಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಕಾಫಿ ಬೆಳೆ ನಾಶದ ಬಗ್ಗೆ ಕಾಫಿ ಮಂಡಳಿ, ಕಂದಾಯ, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ, ವರದಿ ತಯಾರಿಸಿ ನಷ್ಟವಾದ ಬೆಳಗೆ ಸೂಕ್ತ ಪರಿಹಾರ ಒದಗಿಸಬೇಕು.
ನಂಬಿಯಪAಡ ಕಿಶೋರ್ ಚಂಗಪ್ಪ, ಸಿದ್ದಾಪುರ
ಕಳೆದ ಜುಲೈ ಕೊನೆ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಹಾನಿ ಸಂಬAಧ ವರದಿ ನೀಡುವುದಲ್ಲದೆ ಬರ ನಿರ್ವಹಣೆಯನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು. ಬರ ನಿರ್ವಹಣೆ ಸಂಬAಧಿಸಿದAತೆ ಸರ್ಕಾರ ಈಗಾಗಲೇ ಕೊಡಗು ಜಿಲ್ಲೆಗೆ 7.50 ಕೋಟಿ ರೂ. ಬಿಡುಗಡೆ ಮಾಡಿದೆ. ಆ ನಿಟ್ಟಿನಲ್ಲಿ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸಬೇಕು. ಜಾನುವಾರುಗಳಿಗೆ ಮೇವು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮುಂದಿನ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ
ಎರಡು ರಾಜ್ಯಗಳ ರೈತರಿಗೆ ಬದುಕು ಕಟ್ಟಿಕೊಟ್ಟಿರುವ ಕಾವೇರಿ ಮಾತೆಯ ಮಡಿಲಲ್ಲಿ ಬರ ಬಂದಿರುವುದೇ ದೊಡ್ಡ ದುರಂತ. ಹಸಿದವನಿಗೆ ಅರೆ ಕಾಸಿನ ಮಜ್ಜಿಗೆ ಎನ್ನುವ ಹಾಗೆ 5 ತಾಲೂಕಿಗೆ ಕೇವಲ 7.5 ಕೋಟಿ ರೂ. ಯಾವುದಕ್ಕೂ ಸಾಲುವುದಿಲ್ಲ. ರೈತರ ಜಮೀನುಗಳಿಗೆ ನೀರಿನ ಮೂಲವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಮುಂದಾಗಬೇಕು.
ಹರೀಶ್ ಸೋಮಣ್ಣ, ಕುಶಾಲನಗರ.
ಕಾವೇರಿ ಮಾತೆಯ ಒಡಲಿನಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಿರುವುದು ಮನುಷ್ಯನ ಅತಿಯಾಸೆಯಿಂದ. ಕೆರೆ, ಬಾವಿ, ತೊರೆಗಳ ನೀರು ತುಂಬಿಸಲು ಬೇಕಾದ ಸೌಲಭ್ಯಗಳನ್ನು ತಕ್ಷಣ ಮಾಡಬೇಕು. ಪ್ರತಿ ಗ್ರಾಮದಲ್ಲೂ ಅದ್ಯತೆ ಮೇರೆಗೆ ಈ ಕೆಲಸವಾಗಬೇಕು. ಅದರ ಜೊತೆಯಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ನಾಶವಾಗುವುದನ್ನು ತಪ್ಪಿಸಬೇಕು.
ಫ್ಯಾನ್ಸಿ ಮುತ್ತಣ್ಣ, ಸಾಹಿತಿ, ಕುಶಾಲನಗರ