ಜಿಲ್ಲೆ

ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆ ಕೈಬಿಡಿ: ರಾಜ್ಯಸರ್ಕಾರದ ನಿಲುವಿಗೆ ರೈತರ ವಿರೋಧ

ಕೆ.ಎನ್.ರಾಘವೇಂದ್ರ

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನವನ್ನು ಸಾರ್ವಜನಿಕ-ಖಾಸಗಿ(ಪಿಪಿಪಿ) ಸಹಭಾಗಿತ್ವದಲ್ಲಿ 2663.75 ಕೋಟಿ ರೂ ವೆಚ್ಚದಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಆಕರ್ಷಣೀಯ ಕೇಂದ್ರವನ್ನಾಗಿ ಉನ್ನತೀಕರಣಗೊಳಿಸುವುದರ ಜತೆಗೆ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಮಾಡುವ ಯೋಜನೆಗೆ ರಾಜ್ಯಸರ್ಕಾರ ಅನುಮೋದನೆ ನೀಡಿದೆ. ಆದರೆ ಇದಕ್ಕೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವಿರೋಧ ವ್ಯಕ್ತಪಡಿಸಿದ್ದು, ಯೋಜನೆ ಕೈಬಿಡುವಂತೆ ಎಚ್ಚರಿಕೆ ನೀಡಿದೆ.

ರೈತರ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆಯ ಕೆಳಭಾಗದಲ್ಲಿರುವ ಬೃಂದಾವನದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಯೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಎಲ್ಲ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಒಗ್ಗೂಡಿ, ಸಭೆ ನಡೆಸಿ ಚರ್ಚಿಸಿದ್ದೇವೆ. ಈ ಸಭೆಯಲ್ಲಿ ಕೆಆರ್‌ಎಸ್ ಅಣೆಕಟ್ಟೆ ಕೆಳಭಾಗದಲ್ಲಿ ನಿರ್ಮಾಣ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಕೈಗೊಂಡಿರುವ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾರ್ಣಕ್ಕೆ ಸಚಿವ ಸಂಪುಟಸಭೆಯಲ್ಲಿ ತೀರ್ಮಾನ ಮಾಡಿದೆ. ಆದರೆ ಇದಕ್ಕೆ ನಮ್ಮ ವಿರೋಧವಿದ್ದು, ರಾಜ್ಯಸರ್ಕಾರ ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು. ಯಾವುದೇ ಕಾರಣಕ್ಕೂ ಟೆಂಡರ್ ಕರೆಯಬಾರದು. ಈ ವಿಚಾರ ಕುರಿತು ಕಾವೇರಿ ಕೊಳ್ಳದ ರೈತರಿಗೆ ಜಾಗೃತಿ ಮೂಡಿಲಾಗುವುದು ಎಂದು ತಿಳಿಸಿದರು.

ಕೆಆರ್‌ಎಸ್ ಡ್ಯಾಂ ಆಸುಪಾಸಿನ 6 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಲ್ಲಿ ಅರಿವು ಹೆಚ್ಚಿಸುತ್ತೇವೆ. ತಾಂತ್ರಿಕ ತೊಂದರೆಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಸಮಿತಿ ವತಿಯಿಂದಲೇ ಇಂತಹ ಕಾರ್ಯ ಮಾಡಲಾಗುವುದು. ಇತ್ತೀಚೆಗೆ ಕೆಆರ್‌ಎಸ್ ಅಣೆಕಟ್ಟೆಯಿಂದ ಬೆಂಗಳೂರಿಗೆ 5ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ ಕೆಆರ್‌ಎಸ್ ನೀರು ಸಾಕಷ್ಟು ಪ್ರಮಾಣದಲ್ಲಿ ತಲುಪದ ಮಳವಳ್ಳಿಯ ಭಾಗದಲ್ಲಿಯೇ ಶಾಸಕ ನರೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ಯೋಜನೆ ಉದ್ಘಾಟನೆಯಾಗಿರುವುದು ದುರಂತದ ವಿಪರ್ಯಾಸದ ಸಂಗತಿ ಎಂದು ವಿಷಾದಿಸಿದರು.

ಅಂದು ಈ ಯೋಜನೆಯನ್ನು ವಿರೋಧ ಮಾಡಿದ್ದೇವೆ. ಈಗ ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆಯನ್ನು ವಿರೋಧಿಸುತ್ತೇವೆ. ಮುಂದೆ 6ನೇ ಹಂತದ ಯೋಜನೆಯ ರಚನೆಗೆ ಸರ್ಕಾರದಿಂದ ಸುತ್ತೋಲೆ ಬರುತ್ತದೆ. 6ನೇ ಹಂತದ ಯೋಜನೆ ಆಗಲು ಬಿಡುವುದಿಲ್ಲ. ಏಕೆಂದರೆ ಅಣೆಕಟ್ಟೆ ಕಟ್ಟಿರುವ ಉದ್ದೇಶ ರೈತರ ಬೆಳೆಗೆ ನೀರು ಕೊಡುವುದಾಗಿದೆ. ಸ್ಥಳೀಯ ಜನ, ಜಾನುವಾರುಗಳು ಕುಡಿಯಲು ಉಪಯೋಗಕ್ಕೆ ಎನ್ನುವುದನ್ನು ಸರ್ಕಾರ ಮನಗಾಣಬೇಕಿದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕಮಲಾ, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಮಧುಸೂಧನ್, ಸಾತನೂರು ವೇಣುಗೋಪಾಲ್, ಕನ್ನಡಸೇನೆ ಅಧ್ಯಕ್ಷ ಮಂಜುನಾಥ್, ಸುಧೀರ್ ಇತರರಿದ್ದರು.