ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ನಿಂದ 350 ಎಕರೆ ಅರಣ್ಯ ನಾಶವಾಗಲಿದೆ. ಹೀಗಾಗಿ ಈ ಯೋಜನೆಯನ್ನು ಕೈ ಬಿಟ್ಟು ನೆರೆಯ ತಮಿಳುನಾಡು ಸರ್ಕಾರ ರೂಪಿಸಿರುವ ಬಿಇಎಸ್‌ಎಸ್ (ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ) ಅಳವಡಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಂಗಳವಾರ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ನಿಂದ ಉಂಟಾಗುವ ಪರಿಸರ ಹಾನಿ ಕುರಿತು ಸರ್ಕಾರದ ಗಮನಸೆಳೆದರು. ಜತೆಗೆ ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ಸಲಹೆ ನೀಡಿದರು. ತಮಿಳುನಾಡು ಸರ್ಕಾರ ರೂಪಿಸಿರುವ ಯೋಜನೆ ಅತ್ಯುತ್ತಮವಾಗಿದೆ ಎಂದು ತಿಳಿಸಿದರು.
ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ನಿಂದ ಶರಾವತಿ ಅಭಯಾರಣ್ಯದಲ್ಲಿನ ಸಸ್ಯ ಸಂಪತ್ತು, ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೂ ಕುತ್ತು ಬರಲಿದೆ. ಇದರ ಬದಲು ಬಿಇಎಸ್‌ಎಸ್ ಅಳವಡಿಸಿಕೊಂಡರೆ ಕೇಂದ್ರ ಸರ್ಕಾರದಿಂದ ಶೇ.30 ಸಹಾಯಧನ ಸಿಗುತ್ತದೆ. ಪರಿಸರ ಹಾನಿಯನ್ನೂ ತಪ್ಪಿಸಿದಂತಾಗುತ್ತದೆ ಎಂದರು.
ಬಿಇಎಸ್‌ಎಸ್ ಮೂಲಕ ಸೌರಶಕ್ತಿ ಮತ್ತು ಗಾಳಿಯ ಮೂಲಕ ವಿದ್ಯುತ್ ಉತ್ಪಾದಿಸಿ 500 ರಿಂದ ಒಂದು ಸಾವಿರ ಮೆಗಾವಾಟ್ ಸಾಮರ್ಥ್ಯದ ಬ್ಯಾಟರಿಗಳ ಮೂಲಕ ವಿವಿಧ ಸಂಗ್ರಹ ಘಟಕಗಳಲ್ಲಿ ಶೇಖರಿಸಿ, ಹೆಚ್ಚು ಬೇಡಿಕೆ ಸಮಯದಲ್ಲಿ ವಿದ್ಯುತ್ ಬಳಸಿಕೊಳ್ಳಬಹುದು. ವಿದ್ಯುತ್ ಖರೀದಿ ವೆಚ್ಚವೂ ಇದರಿಂದ ಉಳಿತಾಯವಾಗುತ್ತದೆ ಎಂದು ಸರ್ಕಾರದ ಗಮನಸೆಳೆದರು.