ಜಿಲ್ಲೆ

ರಾಣಾನ ಬದಲಿಗೆ ಬಂದ ‘ದ್ರೋಣ‘

  • ಚಾಮರಾಜನಗರ: ಗುಂಡ್ಲುಪೇಟೆ ತಾಲೂಕು ಬಂಡೀಪುರದ ಶೆರ್ಲಾಕ್ಸ್ ಹೋಮ್ ಎಂದು ಕರೆಸಿಕೊಳ್ಳುತ್ತಿದ್ದ ರಾಣಾನ ಸ್ಥಾನ ತುಂಬಿಸಲು ಅರಣ್ಯ ಇಲಾಖೆ ದ್ರೋಣನನ್ನು ಮುನ್ನೆಲೆಗೆ ತಂದು ಸಜ್ಜುಗೊಳಿಸುತ್ತಿದೆ.

  • ಬಂಡೀಪುರ, ನಾಗರಹೊಳೆ, ಮೈಸೂರು, ಶ್ರೀರಂಗಪಟ್ಟಣ, ಮಧುಮಲೈ ಸೇರಿದಂತೆ ನಾನಾ ಕಡೆಗಳಲ್ಲಿ ನಡೆದಿದ್ದ ಅರಣ್ಯ ಅಪರಾಧ ಪ್ರಕರಣಗಳು ಹಾಗೂ ಹುಲಿ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ ರಾಣಾನಿಗೆ ವಯಸ್ಸಾಗುತ್ತಿದ್ದ ಹಿನ್ನೆಲೆ ಅದನ್ನು ಕಾರ್ಯಾಚರಣೆ ಬಳಸಿಕೊಳ್ಳುವುದನ್ನು ಕಡಿಮೆ ಮಾಡಲಾಗಿದೆ. ಹಾಗಾಗಿ, ಅರಣ್ಯ ಇಲಾಖೆ ಅದರ ಸ್ಥಾನ ತುಂಬಲು ಸ್ವದೇಶಿ ತಳಿಯ ನಾಯಿಗಳನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಿತ್ತು.

  • ಸ್ಥಳೀಯ ತಳಿಯಾದ ಮುಧೋಳ್ ಶ್ವಾನಗಳು ಗಡಿ ಭದ್ರತಾಪಡೆ ಮತ್ತು ಸೈನ್ಯದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಇಲ್ಲಿಗೂ ಮುಧೋಳ್ ತಳಿಯನ್ನೇ ಆಯ್ಕೆ ಮಾಡಿದ್ದರು. ಮಾರ್ಗರೇಟ್ ಹೆಸರಿನ ಶ್ವಾನಕ್ಕೆ ಪೊಲೀಸ್ ತರಬೇತಿ ಕೇಂದ್ರದಲ್ಲಿ ಪತ್ತೇದಾರಿ ತರಬೇತಿ ನೀಡಿದ್ದರೂ ಅದು ಜರ್ಮನ್ ಶೆಫರ್ಡ್ ಮಟ್ಟದ ಚಾಣಾಕ್ಷತನ ಪ್ರದರ್ಶನ ಮಾಡಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮತ್ತೊಂದು ಜರ್ಮನ್ ಶೆಫರ್ಡ್ ತಳಿಯ ನಾಯಿಯನ್ನು ಆಯ್ಕೆ ಮಾಡಿ ತರಬೇತಿ ಕೊಡಿಸಿದೆ. ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾದ ಮಾರ್ಗರೇಟ್ ಅನ್ನು ಮೈಸೂರಿನ ಶ್ರೀಗಂಧದ ಕೋಠಿಗೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

  • ಎರಡು ವರ್ಷದ ಶ್ವಾನ: 2022, ಮೇ 2 ರಂದು ಜನಿಸಿದ ಈ ಶ್ವಾನಕ್ಕೆ ಮಹಾಭಾರತದ ಮಹಾಗುರು ದ್ರೋಣರ ಹೆಸರಿಡಲಾಗಿದೆ. ಹರಿಯಾಣದ ಪಂಚಕುಲ ಜಿಲ್ಲೆಯ ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆಯ ತರಬೇತಿ ಶಿಬಿರದಲ್ಲಿ ದ್ರೋಣನೊಂದಿಗೆ ಎಸ್‌ಟಿಪಿಎಫ್‌ನ ಇಬ್ಬರು ಸಿಬ್ಬಂದಿಗೂ 8 ತಿಂಗಳ ಕಾಲ ಪತ್ತೇದಾರಿ ತರಬೇತಿ ನೀಡಲಾಗಿದೆ, ಸದ್ಯ ಅವರೇ ದ್ರೋಣನ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
  • ಎರಡು ವರ್ಷ ವಯಸ್ಸಿನ ದ್ರೋಣ ಈಗಾಗಲೇ ಕೆಲವು ಪ್ರಕರಣಗಳಲ್ಲಿ ತನ್ನ ಚಾಣಾಕ್ಷತನ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾನೆ. ಮೇಲುಕಾನಮಹಳ್ಳಿಯ ಸಫಾರಿ ಟಿಕೆಟ್ ಕೌಂಟರ್ ಪಕ್ಕದಲ್ಲಿರುವ ಎಸ್‌ಟಿಪಿಎಫ್ ಸಿಬ್ಬಂದಿ ವಸತಿಗೃಹದ ಸಮೀಪವೇ ದ್ರೋಣನಿಗೆ ಸ್ಥಳ ನೀಡಲಾಗಿದೆ. ಪಕ್ಕದಲ್ಲಿಯೇ ನಿರ್ಮಿಸಿರುವ ಮೈದಾನದಲ್ಲಿ ಇದರ ತರಬೇತುದಾರರಾದ ಮಹೇಶ್ ಮತ್ತು ಕಾಳಾ ಕಾಲ್ಕರ್ ಇಬ್ಬರೂ ಬೆಳಗ್ಗೆ ದ್ರೋಣನಿಗೆ ಓಡುವ, ವಾಸನೆ ಮೂಲಕ ವಸ್ತುವಿನ ಪತ್ತೆಹಚ್ಚುವ ತರಬೇತಿ ನೀಡುತ್ತಿದ್ದಾರೆ. ವ್ಯಾಯಾಮಗಳನ್ನು ಮಾಡಿಸುತ್ತಿದ್ದಾರೆ. ಸದ್ಯ ಇವನು ಪಾಲ್ಗೊಂಡಿದ್ದ ನಾಲ್ಕು ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದು, ಅರಣ್ಯ ಸಂರಕ್ಷಣೆಯ ಬಗ್ಗೆ ಭರವಸೆ ಮೂಡಿಸಿದ್ದಾನೆ ಎಂದು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಹಾರ ಏನೇನು?

ವೈದ್ಯರ ಸಲಹೆ ಮೇರೆಗೆ ದ್ರೋಣನಿಗೆ ಪ್ರತಿದಿನವೂ ಬೆಳಗ್ಗೆ ಮತ್ತು ಸಂಜೆ 500 ಗ್ರಾಂ ನಷ್ಟು ಪೆಡಿಗ್ರಿ, ಬೆಳಗ್ಗೆ 1 ಮೊಟ್ಟೆ, 500 ಮಿಲೀ ಹಾಲು ಮೊಸರು, ಸಂಜೆ ಮಾಂಸ ಇಲ್ಲವೇ ಅಂಬಲಿ, ವಾರಕ್ಕೆ ನಾಲ್ಕು ಬಾರಿ ಚಪಾತಿ ಇಲ್ಲವೇ ಅನ್ನ ಹಾಗೂ ಬೇಯಿಸಿದ ತರಕಾರಿ, ವಾರಕ್ಕೊಮ್ಮೆ ಸ್ನಾನ, ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ.

ಸದ್ಯ ತನ್ನ ತರಬೇತುದಾರರು ನೀಡುವ ಸೂಚನೆಗಳನ್ನು ದ್ರೋಣ ಚುರುಕಾಗಿ ಗ್ರಹಿಸಿ ಕಾರ್ಯನಿರ್ವಹಿಸುತ್ತಿದ್ದಾನೆ. ತಾನು ಭಾಗವಹಿಸಿದ ನಾಲ್ಕು ಪ್ರಕರಣಗಳಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಮುಂದಿನ ದಿನಗಳಲ್ಲಿ ಅರಣ್ಯ ಸಂರಕ್ಷಣೆಗೆ ನೆರವಾಗಲಿದೆ.ನವೀನ್, ಬಂಡೀಪುರ ಉಪವಿಭಾಗದ ಎಸಿಎಫ್.