Oplus_131072 
ಜಿಲ್ಲೆ

ಹೊನಲು ಬೆಳಕಿನ ವಾಲಿಬಾಲ್ ಪಂದ್ಯಕ್ಕೆ ಚಾಲನೆ

Mysuru - Desk - Naveen Kumar H P


ಚನ್ನರಾಯಪಟ್ಟಣ : ರಾಜಕೀಯ ನಿಂತ ನೀರಲ್ಲ, ಸೋತು ಗೆದ್ದವರೇ ಎಲ್ಲರೂ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅತ್ಯಲ್ಪ ಮತಗಳ ಅಂತರದಿಂದ ಸೋತರೂ, ಕ್ಷೇತ್ರದಲ್ಲಿ ಜನರ ಕಷ್ಟ, ಸಮಸ್ಯೆ ಆಲಿಸುತ್ತಿರುವ ಮುಖಂಡ ಎಂ.ಎ.ಗೋಪಾಲಸ್ವಾಮಿ ಅವರಿಗೆ ಶೀಘ್ರವೇ ಒಳ್ಳೆ ದಿನಗಳು ಬರಲಿವೆ ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ವಿಶ್ವಾಸ ವ್ಯಕ್ತಪಡಿಸಿದರು.


ಕಾಂಗ್ರೆಸ್ ಮುಖಂಡ ಎಂ.ಎ.ಗೋಪಾಲಸ್ವಾಮಿ ಅವರ 54ನೇ ವರ್ಷದ ಹುಟ್ಟುಹಬ್ಬದ ಸಲುವಾಗಿ ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್‌ನ ಸಹಕಾರದಿಂದ ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಯೋಜಿಸಲಾಗಿರುವ ಅಂತಾರಾಷ್ಟ್ರೀಯ ಮಟ್ಟದ ಆಲ್ ಇಂಡಿಯಾ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ದೀಪ ಬೆಳಗಿಸಿ, ವಾಲಿಬಾಲ್ ಬಿಡಗಡೆಗೊಳಿಸಿ ಅವರು ಮಾತನಾಡಿದರು.


ರಾಜಕೀಯದ ಜತೆಗೆ ಸಾರ್ವಜನಿಕರ ಸೇವೆಗೆ ಮುಂದಾಗಿರುವ ಗೋಪಾಲಸ್ವಾಮಿ ಅವರು ಕ್ರೀಡಾಸಕ್ತ ತಂಡಗಳನ್ನು ವಿವಿಧ ರಾಜ್ಯಗಳಿಂದ ಕರೆಸಿ ಮನರಂಜನೆ ನೀಡುತ್ತಿದ್ದಾರೆ. ಇದರ ಜತೆಗೆ ತಾಲೂಕಿನ ಸಮಗ್ರ ಜನರ ಆರೋಗ್ಯದ ದೃಷ್ಠಿಯಿಂದ ಪ್ರತಿವರ್ಷ ಆರೋಗ್ಯ ಮೇಳ ಆಯೋಜಿಸುತ್ತಿದ್ದಾರೆ. ಈ ವರ್ಷ ಅ.6 ರಂದು ಆರೋಗ್ಯ ಮೇಳ ಆಯೋಜಿಸಲಾಗಿದ್ದು, ಎಲ್ಲ ರೀತಿಯ ಪರೀಕ್ಷೆ ಮಾಡಲಾಗುತ್ತಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಮೂರು ದಿನಗಳ ಪಂದ್ಯಾವಳಿಗೆ ಮೊದಲ ದಿನವೇ ಮಳೆರಾಯನ ಕಾಟ ಎದುರಾಗಿ 2 ಗಂಟೆ ತಡವಾಗಿ ಟೂರ್ನಿಗೆ ಚಾಲನೆ ನೀಡಲಾಯಿತು. ಕ್ರೀಡಾಪ್ರೇಮಿಗಳು ಆಟ ನೋಡಲು ಕಿಕ್ಕಿರಿದು ಸೇರಿದ್ದರು. ಝಗಮಗಿಸುವ ಬಣ್ಣ, ಬಣ್ಣದ ಲೈಟ್‌ಗಳು, 5 ಸಾವಿರ ಜನರು ಕೂತು ನೋಡಬಹುದಾದ ಪೇಕ್ಷಕರ ಗ್ಯಾಲರಿ. ರಾಷ್ಟ್ರವನ್ನು ಪ್ರತಿನಿಧಿಸಿದ ಅತ್ಯುತ್ತಮ ಆಟಗಾರರ ಆಟ. ನೆರೆದಿದ್ದ ಪೇಕ್ಷಕರ, ಗಣ್ಯರ ಮೆಚ್ಚುಗೆ ಗಳಿಸಿತ್ತು. ಪ್ರತಿ ಆಟದ ಮಧ್ಯೆ ಬಂದು ಕುಣಿಯುವ ಚಿಯರ್ ಗರ್ಲ್ಸ್ ಮತ್ತು ಡೊಳ್ಳು ಗೊಂಬೆಗಳು ಆಟದ ಮೆರುಗನ್ನು ಮತ್ತಷ್ಟು ಹೆಚ್ಚು ಮಾಡಿತ್ತು.


ಸೋನೆ ಮಳೆಯ ನಡುವೆಯೂ ಮೊದಲ ಪಂದ್ಯವಾಡಿದ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಜನರಿಗೆ ತಮ್ಮ ಆಟದ ಮೂಲಕ ರಸದೌತಣ ನೀಡಿದವು. ಇನ್ನೂ ಎರಡು ದಿನಗಳು ನಡೆಯುವ ಟೂರ್ನಿಯೂ ಪೇಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡಲಿವೆ.


ಇದೇ ವೇಳೆ ಹಿರಿಯ ವಾಲಿಬಾಲ್ ಆಟಗಾರರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ, ಮುಖಂಡ ಬಾಗೂರು ಪುಟ್ಟರಾಜು, ಮುರಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ಮಂಜೇಗೌಡ, ಕರ್ನಾಟಕ ರಾಜ್ಯ ವಾಲಿಬಾಲ್ ಅಸೊಸಿಯೇಷನ್ ಪ್ರಧಾನ ಕಾರ್ಯದರ್ಶಿ ನಂದ್‌ಕುಮಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಆರ್.ಮೂರ್ತಿ, ಗ್ಯಾರೆಂಟಿ ಯೋಜನೆ ಸಮಿತಿ ತಾ.ಅಧ್ಯಕ್ಷ ಪ್ರಕಾಶ್‌ಗೌಡ, ಜಿ.ಪಂ.ಮಾಜಿ ಸದಸ್ಯ ಎಂ.ಎ.ರಂಗಸ್ವಾಮಿ, ಅಶೋಕ್, ಜಗದೀಶ್ ಸೇರಿ ಇತರರು ಇದ್ದರು.