ಜಿಲ್ಲೆ

ಶೀಘ್ರ ಕಸಮುಕ್ತ ಮಂಡ್ಯ ಆಂದೋಲನ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಾರ್ವಜನಿಕರು ಎಲ್ಲೆಂದೆರಲ್ಲ ಕಸ ಎಸೆಯಬಾರದು. ಇದರಿಂದ ನಗರದ ಸೌಂಧರ್ಯ ಹಾಳಾಗುತ್ತದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ನಗರದ 26ನೇ ವಾರ್ಡ್‌ನಲ್ಲಿ ಒಂದು ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಪ್ರತಿ ಮನೆಗೂ ಕಸ ಹಾಕಿಕೊಳ್ಳಲು ಡಬ್ಬಗಳನ್ನು ನೀಡಲಾಗಿದೆ. ಮಾತ್ರವಲ್ಲದೆ ಮನೆ ಬಾಗಿಲಿಗೆ ವಾಹನದಲ್ಲಿ ಬಂದು ಹಸಿ ಹಾಗೂ ಒಣ ಕಸವನ್ನು ಹಾಕಿಸಿಕೊಳ್ಳುವ ವ್ಯವಸ್ಥೆ ಇದೆ. ಆದಾಗ್ಯೂ ಕೆಲವರು ಖಾಲಿ ಜಾಗ ಅಥವಾ ಎಲ್ಲೆಂದರಲ್ಲಿ ಕಸ ಬೀಸಾಡುತ್ತಾರೆ. ಸ್ವಚ್ಛತೆ ಮಾಡುವುದು ನಮ್ಮ ಕರ್ತವ್ಯ. ಅದೇ ರೀತಿ ಸಾರ್ವಜನಿಕರು ಕೂಡ ಸಹಕರಿಸಬೇಕು. ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಕಸಮುಕ್ತ ಮಂಡ್ಯ ಆಂದೋಲನ ನಡೆಸಲಾಗುವುದು ಎಂದರು.

26ನೇ ವಾರ್ಡ್‌ನಲ್ಲಿ ರಸ್ತೆ ಹಾಗೂ ಉದ್ಯಾನದ ಅಭಿವೃದ್ಧಿಗೆ ಸಾರ್ವಜನಿಕರು ಮನವಿ ಮಾಡಿದ್ದರು. ಅದರಂತೆ ಈಗ 50 ಲಕ್ಷ ರೂ ವೆಚ್ಚದಲ್ಲಿ ಉದ್ಯಾನ ಹಾಗೂ 50 ಲಕ್ಷ ರೂ ವೆಚ್ಚದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದಲ್ಲದೆ ಗಾಂಧಿ ಉದ್ಯಾನದ ಅಭಿವೃದ್ಧಿಗೆ 1.80 ಕೋಟಿ ರೂ, ಅಶೋಕನಗರ ಉದ್ಯಾನಕ್ಕೆ 30 ಲಕ್ಷ ರೂ ಸೇರಿದಂತೆ ಒಟ್ಟಾರೆ ನಗರದ ಎಲ್ಲ ಉದ್ಯಾನದ ಅಭಿವೃದ್ಧಿ ಮಾಡಲು ಮೂರು ಕೋಟಿ ರೂ ಅನುದಾನ ನೀಡಲಾಗುತ್ತಿದೆ. ನಗರದಲ್ಲಿ ಅಭಿವೃದ್ಧಿ ಕೆಲಸಗಳು ಸರಾಗವಾಗಿ ನಡೆಯುತ್ತಿದೆ ಎಂದು ವಿವರಿಸಿದರು.

ಮುಡಾ ಅಧ್ಯಕ್ಷ ನಯೀಂ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್, ಸದಸ್ಯರಾದ ಎಚ್.ಎಸ್.ಮಂಜು, ಶ್ರೀಧರ್, ಗೀತಾ, ಸೌಭಾಗ್ಯ, ಪೂರ್ಣಿಮಾ, ರಜಿನಿ ಇತರರಿದ್ದರು.