ಸೋಮವಾರಪೇಟೆ ಕಿಬ್ಬೆಟ್ಟ ಗ್ರಾಮದಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಬಿದ್ದಿದ್ದು, ವಾಹನ ಮಾಲೀಕರು ಮತ್ತು ಸಾರ್ವಜನಿಕರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. 
ಜಿಲ್ಲೆ

ರಸ್ತೆಗೆ ಬಿದ್ದ ಮರ ತೆರವುಗೊಳಿಸಿದ ಚಾಲಕರು

ಮಾದೇಶ್ ತಿ.ನರಸೀಪುರ

ಸೋಮವಾರಪೇಟೆ: ಕಿಬ್ಬೆಟ್ಟ ಗ್ರಾಮದ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಸಂಚಾರಕ್ಕೆ ತೊಂದರೆಯಾಯಿತು. ಬುಧವಾರ ಒಂದು ಗಂಟೆ ಕಾಲ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.

ಬೆಳಗಿನ ಸಮಯದಲ್ಲಿ ಸಾಕಷ್ಟು ವಾಹನ ಸಂಚಾರ ಇದ್ದರೂ, ಅದೃಷ್ಟವಶಾತ್ ಯಾವುದೇ ಅವಘಡಗಳು ಸಂಭವಿಸಲಿಲ್ಲ. ನಂತರ ಇಲ್ಲಿ ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಸೆಸ್ಕ್ ಸಿಬ್ಬಂದಿ ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ತೆರವುಗೊಳಿಸಲು ಮುಂದಾಗಲಿಲ್ಲ.

ಒಂದು ಗಂಟೆ ಕಾಲ ಕಾದು ನಿಂತಿದ್ದ ವಾಹನಗಳ ಚಾಲಕರು ಮತ್ತು ಮಾಲೀಕರು ಹಣ ಸಂಗ್ರಹಿಸಿ ಮರ ಕತ್ತರಿಸುವ ವ್ಯಕ್ತಿಯೊಬ್ಬರನ್ನು ಸ್ಥಳಕ್ಕೆ ಕರೆತಂದು ತುಂಡರಿಸಿದರು. ನಂತರ ಸಾರ್ವಜನಿಕರು ಒಟ್ಟಿಗೆ ಸೇರಿ ಮರವನ್ನು ರಸ್ತೆಯ ಬದಿಗೆ ತಳ್ಳಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.