ಮಡಿಕೇರಿ: ಭಾರತೀಯ ರೆಡ್‌ಕ್ರಾಸ್‌ನ ಕೊಡಗು ಘಟಕದ ವತಿಯಿಂದ ಸುಸಜ್ಜಿತ ವೈದ್ಯಕೀಯ ತಪಾಸಣಾ ಬಸ್‌ನ್ನು ಮಾ.೨ ರಂದು ಗುರುವಾರ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ರೆಡ್‌ಕ್ರಾಸ್ ಸಭಾಪತಿ ಬಿ.ಕೆ. ರವೀಂದ್ರ ರೈ ಪ್ರಕಟಣೆಯಲ್ಲಿ ನೀಡಿದ್ದಾರೆ.
ಮಡಿಕೇರಿಯ ಗಾಂಧಿ ಮಂಟಪದ ಆವರಣದಲ್ಲಿ ಮಾ.೨ ರಂದು ಬೆಳಗ್ಗೆ ೯ ಗಂಟೆಗೆ ಆಯೋಜಿತ ಕಾರ್ಯಕ್ರಮದಲ್ಲಿ ೭೫ ಲಕ್ಷ ರೂ. ಮೌಲ್ಯದ ಸುಸಜ್ಜಿತ ಮೊಬೈಲ್ ಘಟಕವನ್ನು ಮಡಿಕೇರಿ ಕ್ಷೇತ್ರದ ಶಾಸಕರು ಮತ್ತು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯರವರು ಲೋಕಾರ್ಪಣೆ ಮಾಡಲಿದ್ದಾರೆ. ರೆಡ್‌ಕ್ರಾಸ್ ಸಭಾಧ್ಯಕ್ಷರಾದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಕಾರ್ಯಪ್ಪ, ರೆಡ್‌ಕ್ರಾಸ್ ಕೊಡಗು ಘಟಕದ ಸಭಾಪತಿ ಬಿ.ಕೆ.ರವೀಂದ್ರ ರೈ, ಉಪಾಧ್ಯಕ್ಷ ಅನಿಲ್ ಎಚ್.ಟಿ, ಕಾರ್ಯದರ್ಶಿ ಮುರಳೀಧರ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ಕೊಡಗು ರೆಡ್‌ಕ್ರಾಸ್ ಘಟಕದ ಕೋರಿಕೆಯನ್ವಯ ೭೫ ಲಕ್ಷ ರೂ. ಮೌಲ್ಯದ ಸುಸಜ್ಜಿತವಾದ ವೈದ್ಯಕೀಯ ತಪಾಸಣೆಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮೊಬೈಲ್ ಆಸ್ಪತ್ರೆಯನ್ನು ಕೊಡಗು ಜಿಲ್ಲೆಗೆ ರವಾನಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಮೊಬೈಲ್ ಘಟಕ ಗ್ರಾಮೀಣ ಭಾಗಗಳೂ ಸೇರಿದಂತೆ ಜಿಲ್ಲೆಯಾದ್ಯಂತ ಜನತೆಗೆ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.