ಬೆಳಗಾವಿ: ಗುರುದೇವ ರಾನಡೆಯವರ ಜೀವನ ದರ್ಶನದ ಅಧ್ಯಯನವೆಂದರೆ, ಸಮಗ್ರ ತತ್ವಶಾಸ್ತ್ರೀಯ ಚಿಂತನೆ ಮತ್ತು ಅನುಭಾವದ ಸಾಧನೆಯ ಅಧ್ಯಯನವೇ ಆಗಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಬಾಲಗಣಪತಿ ದೇವರಕೊಂಡ ಅಭಿಪ್ರಾಯಪಟ್ಟರು.
ಇಲ್ಲಿನ ಹಿಂದವಾಡಿಯ ಕೆಎಲ್‌ಎಸ್‌ನ ಕೆ.ಕೆ.ವೇಣುಗೋಪಾಲ ಸಭಾಂಗಣದಲ್ಲಿ ಅಕಾಡೆಮಿ ಆಫ್ ಕಂಪೇರೇಟಿವ್ ಫಿಲಾಸಫಿ ಆ್ಯಂಡ್ ರಿಲಿಜನ್‌ನ(ಎಸಿಪಿಆರ್) ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ‘ಗುರುದೇವ ರಾನಡೆ ಅವರ ಜೀವನ ದರ್ಶನ, ಅವರು ಕೈಗೊಂಡ ಕೆಲಸಗಳು ಹಾಗೂ ತತ್ವಜ್ಞಾನದ ಚಿಂತನೆ’ ಕುರಿತಾದ ರಾಷ್ಟ್ರೀಯ ಅಧಿವೇಶನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉದ್ಘಾಟಿಸಿದ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ, ‘ಎಸಿಪಿಆರ್ ವಿಶ್ವವಿದ್ಯಾಲಯವಾಗಿ ಬೆಳೆಯಲಿ’ ಎಂದು ಆಶಿಸಿದರು.
ಎಸಿಪಿಆರ್ ಕಾರ್ಯದರ್ಶಿ ಎಂ.ಬಿ.ಜಿರಲಿ, ‘ರಾನಡೆಯವರು ತತ್ವಶಾಸ್ತ್ರವೆಂಬ ಆಗಸದ ಚಂದ್ರನಾಗಿದ್ದಾರೆ. ಸಂಘರ್ಷವೆಂಬ ಜಗತ್ತಿಗೆ ಶಾಂತಿಧೂತರಾಗಿದ್ದಾರೆ’ ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಮಾತನಾಡಿದರು. ಆನಂದ ಹೊಸೂರ ಉಪಸ್ಥಿತರಿದ್ದರು. ಗಿರೀಶ ಜೋಶಿ ಪ್ರಾರ್ಥಿಸಿದರು. ಎಸಿಪಿಆರ್ ಅಧ್ಯಕ್ಷ ಅಶೋಕ ಪೋತದಾರ ವಂದಿಸಿದರು.
ನಂತರ ವಿವಿಧ ಗೋಷ್ಠಿಗಳು ನಡೆದವು. ದೇಶದ ವಿವಿಧೆಡೆಯ ತತ್ವಜ್ಞಾನಿಗಳು ಪಾಲ್ಗೊಂಡಿದ್ದರು.