ಜಿಲ್ಲೆ

ಭಟ್ಕಳದಲ್ಲಿ ಮಾರಿಜಾತ್ರೆಗೆ ಚಾಲನೆ, ಗದ್ದುಗೆಯಿಂದ ಮೂರ್ತಿ ತಂದು ಮೆರವಣಿಗೆ

ಭಟ್ಕಳ: ಪಟ್ಟಣದ ಮಾರಿಗುಡಿಯಲ್ಲಿ ಬುಧವಾರ ಬೆಳಗ್ಗೆ ಮಾರಿಯಮ್ಮನ ಮೂರ್ತಿಯನ್ನು ಗದ್ದುಗೆಯಿಂದ ಮೆರವಣಿಗೆ ಮೂಲಕ ತಂದು ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಮಾರಿಜಾತ್ರೆಗೆ ಚಾಲನೆ ನೀಡಲಾಯಿತು.


ಮೂರ್ತಿ ತಯಾರಕ ವಿಶ್ವಕರ್ಮ ಸಮಾಜದವರಿಂದ ಮಂಗಳವಾರ ರಾತ್ರಿ ತವರು ಮನೆಯ ವಿಶೇಷ ಪೂಜೆ ನಡೆಯಿತು. ಬುಧವಾರ ಬೆಳಗ್ಗೆ ಶ್ರೀ ಮಾರಿಕಾಂಬಾ ದೇವಿಯನ್ನು ಚಂಡೆ ವಾದ್ಯ, ನೃತ್ಯ ಮೆರವಣಿಗೆಯ ಮೂಲಕ ಗರ್ಭಗುಡಿಯ ಹೊರಗೆ ತಂದು ಪ್ರತಿಷ್ಠಾಪಿಸಲಾಯಿತು.


ಸಚಿವ ಮಂಕಾಳ ವೈದ್ಯ ಆಗಮಿಸಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಮಾಜಿ ಶಾಸಕ ಸುನೀಲ ನಾಯ್ಕ, ಜೆ.ಡಿ. ನಾಯ್ಕ, ತಹಸೀಲ್ದಾರರು, ಉಪವಿಭಾಗಾಧಿಕಾರಿಗಳು ಸೇರಿ ಇತರರು ಬಂದು ದೇವಿಯ ದರ್ಶನ ಪಡೆದರು.


ತಾಲೂಕಿನ ಪ್ರಸಿದ್ಧ ಜಾತ್ರೆಗಳಲ್ಲಿ ಮಾರಿ ಜಾತ್ರೆಯೂ ಒಂದಾಗಿದೆ. ಹಿಂದೆ ಮನೆಯಲ್ಲಿ ಸಿಡುಬು, ಪ್ಲೇಗ್, ಕಾಲರಾದಂತಹ ಕಾಯಿಲೆಗಳು ಬಂದಾಗ ಮಾರಿದೇವಿಯನ್ನು ಸ್ಮರಿಸಿ ಹರಕೆ ಹೊತ್ತುಕೊಳ್ಳುವುದು ವಾಡಿಕೆ. ಅದೇ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ತಾಲೂಕಿನ ಗ್ರಾಮೀಣ ಭಾಗದ ಜನರು ಬುಧವಾರ ಹಬ್ಬ ಆಚರಿಸಿದರೆ, ಗುರುವಾರ ನಗರ ಭಾಗದ ಜನರು ಹಬ್ಬ ಆಚರಿಸುವುದು ವಾಡಿಕೆ. ಗುರುವಾರ ಸಂಜೆ 4 ಗಂಟೆಯವರೆಗೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿ ನಂತರ ವಿಸರ್ಜನೆ ಮಾಡಲಾಗುತ್ತದೆ.


ದೇವಸ್ಥಾನದ ಟ್ರಸ್ಟಿಗಳಾದ ರಘುವೀರ ಬಾಳಗಿ, ಪರಮೇಶ್ವರ ನಾಯ್ಕ, ಶ್ರೀಧರ ನಾಯ್ಕ, ಶ್ರೀಪಾದ ಕಂಚುಗಾರ, ನರೇಂದ್ರ ನಾಯಕ ಸೇರಿ ಇತರ ಸದಸ್ಯರು, ಸ್ವಯಂ ಸೇವಕರು ಸೇವೆ ಸಲ್ಲಿಸಿದರು.