ಜಿಲ್ಲೆ

ಬೆಟ್ಟ ಹತ್ತುವ ಸ್ಪರ್ಧೆಗೆ ಚಾಲನೆ

ರಾಜಣ್ಣ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಪಾರಂಪರಿಕ ದಸರಾ ಆಚರಣೆಯ 2ನೇ ದಿನವಾದ ಶನಿವಾರ ಬೆಟ್ಟ ಹತ್ತುವ(ಚಾರಣ) ಸ್ಪರ್ಧೆಗೆ ಪಾಂಡವಪುರ ಉಪವಿಭಾಗಾಧಿಕಾರಿ ಶಿವಮೂರ್ತಿ ಚಾಲನೆ ನೀಡಿದರು.


ಕರಿಫಟ್ಟದ ಪಾದದಿಂದ ಬೆಟ್ಟದ ಮೇಲಿನ ದೇವಸ್ಥಾನವರೆಗೆ ಹತ್ತಬೇಕಿದ್ದು, 29 ವರ್ಷದೊಳಗಿನ ಯುವಕ-ಯುವತಿಯರು ಹಾಗೂ 30 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರು ಸೇರಿದಂತೆ ಸುಮಾರು 200 ಜನರು ಭಾಗವಹಿಸಿದ್ದರು.


ವಾತಾವರಣ ಚೆನ್ನಾಗಿದ್ದು, ಸ್ವಲ್ಪ ಮಟ್ಟಿಗೆ ಮಳೆ ಆಗಿರುವುದರಿಂದ ಬೆಟ್ಟ ಹತ್ತುವ ವೇಳೆ ಜಾರಿ ಬೀಳುವ ಸಾಧ್ಯತೆ ಇದೆ. ಹಾಗಾಗಿ ಭಾಗವಾಹಿಸುವ ಎಲ್ಲ ಕ್ರೀಡಾಪಟುಗಳು ಜಾಗರೂಕತೆಯಿಂದ ಬೆಟ್ಟ ಹತ್ತುವಂತೆ ಶಿವಮೂರ್ತಿ ಸಲಹೆ ನೀಡಿದರು.


ಸ್ಪರ್ಧೆ ವಿಜೇತರು: 30 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಎಸ್.ಜಿ.ವಿಜಯ ಪ್ರಥಮ , ಶಾಂತ ಕುಮಾರಿ ದ್ವಿತೀಯ, ಎನ್.ಆರ್.ಶೋಭಾ ತೃತೀಯ ಸ್ಥಾನ ಗಳಿಸಿದರು. ಪುರುಷರಲ್ಲಿ ಟಿ.ಸಿ.ನವೀನ ಪ್ರಥಮ, ಎಸ್.ಡಿ.ಅಭಿಷೇಕ್ ದ್ವಿತೀಯ, ಪಿ.ಹರೀಶ್ ತೃತೀಯ ಸ್ಥಾನ ಗಳಿಸಿದರು.


29 ವರ್ಷ ಒಳಪಟ್ಟ ಮಹಿಳೆಯರಲ್ಲಿ ಎಸ್.ಜಯಶ್ರೀ ಪ್ರಥಮ, ಎಸ್.ಆರ್.ಮಾನಸಾ ದ್ವಿತೀಯ, ದಿವ್ಯಾ ತೃತೀಯ ಸ್ಥಾನಗಳಿಸಿದರು. ಪುರುಷರಲ್ಲಿ ಮಣಿಕಂಠ ಪ್ರಥಮ, ಭರತ್ ದ್ವಿತೀಯ, ವೈಶಾಕ್ ತೃತೀಯ ಸ್ಥಾನ ಗಳಿಸಿದರು. ಪ್ರಥಮ-1500 ರೂ., ದ್ವಿತೀಯ 1000 ರೂ., ತೃತೀಯ 500 ರೂ. ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಬಿ.ಎನ್.ಸೀತಾಲಕ್ಷ್ಮೀ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ನಾಗಮಂಗಲ ತಹಸೀಲ್ದಾರ್ ಆದರ್ಶ್, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು


ಮಹಿಳಾ ದಸರ: ಮಹಿಳಾ ದಸರಾ ಕಾರ್ಯಕ್ರಮದ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶ್ರೀರಂಗನಾಥಸ್ವಾಮಿ ಮೈದಾನದ ಶ್ರೀರಂಗ ವೇದಿಕೆಯಲ್ಲಿ ರಂಗೋಲಿ, ಮೆಹಂದಿ, ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಗೀತೆ, ಮಕ್ಕಳ ಕಳ್ಳ ಸಾಗಣೆ ತಡೆಗಟ್ಟುವ ಕುರಿತ ನಾಟಕ, ಜಾನಪದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.


*ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ
ಎನ್.ಜಿ.ಶ್ವೇತಶ್ರೀ- ಪ್ರಥಮ, ಮಾನಸಾ ಎಸ್.ಪೂರ್ಣಿಮಾ ದ್ವಿತೀಯ, ಶಾಲಿನಿ ತೃತೀಯ ಸ್ಥಾನ ಪಡೆದಿದ್ದು, ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಜಾಗೃತಿ ಗೀತೆ, ನಾಟಕ, ಜಾನಪದ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೂ ಪ್ರಮಾಣ ಪತ್ರ ನೀಡಲಾಯಿತು.


ಮೆಹೆಂದಿ ಸ್ಪರ್ಧೆ: ವೇದಿಕೆ ಮುಂಭಾಗ ಆಯೋಜಿಸಿದ್ದ ಮೆಹಂದಿ ಸ್ಪರ್ಧೆಯಲ್ಲಿ ಸಮ್ರೀನ್ ತಾಜ್ ಪ್ರಥಮ , ಎಸ್.ಅನುಷಾ ದ್ವಿತೀಯ, ಹಾಗೂ ತೃತೀಯ ಸ್ಥಾನ ಶಾಲಿನಿ ಪಾಲಹಳ್ಳಿ ಅವರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಪತ್ನಿ ಸುಮತಿ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಇದರೊಂದಿಗೆ ಮಹಿಳೆಯರಿಗಾಗಿ ಮ್ಯೂಸಿಕಲ್ ಚೇರ್, ಗುಂಡು ಎಸೆತ, ಓಟ ಸ್ಪರ್ಧೆ, ಹಗ್ಗ ಜಿಗಿತ, ಮಡಿಕೆ ಹೊಡೆತ, ವೇಷ ಭೂಷಣ. ಹೀಗೆ ಇತರ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ, ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ, ತಾಲೂಕು ಪಂಚಾಯಿತಿ ಇಒ ವೇಣು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೆಘಾ, ಪಾಂಡವಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೂರ್ಣಿಮಾ ಇತರರು ಉಪಸ್ಥಿತರಿದ್ದರು.