ಪೊನ್ನಂಪೇಟೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಎ.ಎಸ್ ಪೊನ್ನಣ್ಣ ಉದ್ಘಾಟಿಸಿದರು. ತಹಸೀಲ್ದಾರ್ ಮೋಹನ್‌ಕುಮಾರ್, ಪರಹಿತಾನಂದ ಸ್ವಾಮೀಜಿ ಮತ್ತಿತರರಿದ್ದರು. 
ಜಿಲ್ಲೆ

ಪೊನ್ನಂಪೇಟೆಯಲ್ಲಿ ಭುವನೇಶ್ವರಿ ರಥಕ್ಕೆ ಚಾಲನೆ

ಗೋಣಿಕೊಪ್ಪ: ಪೊನ್ನಂಪೇಟೆ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಪೊನ್ನಂಪೇಟೆಯ ಸ್ನೇಹಿತರ ಬಳಗ ಪ್ರತ್ಯೇಕವಾಗಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಿಂದ ಶುಕ್ರವಾರ ಆಚರಿಸಿದರು.

ಪೊನ್ನಂಪೇಟೆ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಪಟ್ಟಣದ ಕೆ.ಪಿ.ಎಸ್. ಶಾಲಾ ಆವರಣದಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಶಾಸಕ ಎ.ಎಸ್ ಪೊನ್ನಣ್ಣ ಭುವನೇಶ್ವರಿಯ ರಥಕ್ಕೆ ಚಾಲನೆ ನೀಡಿದರು. ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಸ್ನೇಹಿತರ ಬಳಗ ಕೂಡ ಅದ್ದೂರಿಯಾಗಿ ಭುವನೇಶ್ವರಿ ಭಾವಚಿತ್ರ ಹೊತ್ತ ರಥವನ್ನು ಮೆರವಣಿಗೆ ನಡೆಸಿದರು.

ಪೊನ್ನಂಪೇಟೆಯ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಜರುಗಿತು. ಶಾಸಕ ಎ.ಎಸ್ ಪೊನ್ನಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡದ ಉಳಿವಿಗಾಗಿ ಹಲವಾರು ಚಳವಳಿಗಳು ನಡೆದವು. ನಾವು ಇತಿಹಾಸವನ್ನು ಓದುವ ಮೂಲಕ ಅವುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ರಾಜ್ಯೋತ್ಸವ ಕೇವಲ ಆಚರಣೆ ಆಗಬಾರದು. ಈ ನಾಡಿದ ಜನ ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸೀಲ್ದಾರ್ ಮೋಹನ್‌ಕುಮಾರ್ ವಹಿಸಿದ್ದರು. ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪರಹಿತಾನಂದ ಸ್ವಾಮೀಜಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಿರ ಹರೀಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ದಯಾ ಚಂಗಪ್ಪ, ಭೂಮಾಪನ ಇಲಾಖೆಯ ಅರುಣ್, ತಾಲೂಕು ಪಂಚಾಯಿತಿ ಇಒ ಅಪ್ಪಣ್ಣ, ಸದಸ್ಯ ರಶೀದ್ ಮತ್ತಿತರು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

ಸ್ನೇಹಿತರ ಬಳಗದ ವತಿಯಿಂದ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು.