ವಿಜಯಪುರ ಬಿಎಲ್‌ಡಿಇ ಇಂಜನಿಯರಿಂಗ್ ಎದುರಿಗಿನ ಐತಿಹಾಸಿಕ ಬಾವಿಯನ್ನು ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಸ್ವಚ್ಛಗೊಳಿಸುತ್ತಿರುವುದು. 
ಜಿಲ್ಲೆ

ಐತಿಹಾಸಿಕ ಬಾವಿ ಸ್ವಚ್ಛತೆಗೆ ಚಾಲನೆ

ಗಿರೀಶ ಸಗರ

ವಿಜಯಪುರ: ನಗರದ ಬಿಎಲ್‌ಡಿಇ ಇಂಜನಿಯರಿಂಗ್ ಎದುರಿಗಿರುವ ಚಾಬುಕ್ ಸವಾರ್ ದರ್ಗಾ ಬಳಿಯ ಐತಿಹಾಸಿಕ ಬಾವಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಕರ್ನಾಟಕ ಜಲ ಬಿರಾದರಿ ಸಂಸ್ಥೆ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್‌ಗಳ ನೇತೃತ್ವದಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯಕ್ಕೆ ಪಾಲಿಕೆ ಮೇಯರ್, ಉಪಮೇಯರ್ ಮತ್ತು ಅಪರ ಜಿಲ್ಲಾಧಿಕಾರಿಗಳು ಜಂಟಿಯಾಗಿ ಚಾಲನೆ ನೀಡಿದರು.

ಜಲ ಬಿರಾದರಿ ಸಂಸ್ಥೆಯ ಅಧ್ಯಕ್ಷ ಪೀಟರ್ ಅಲೇಕ್ಸಾಂಡರ್ ಮಾತನಾಡಿ, ನಗರದಲ್ಲಿರುವ ಐತಿಹಾಸಿಕ ಬಾವಿಗಳು ಪುನುರುಜ್ಜೀವನ ಮಾಡಿದರೇ ಬೇಸಿಗೆಯ ವೇಳೆ ನೀರಿನ ಬವಣೆ ತಪ್ಪಿಸಲು ಸಾಧ್ಯವಾಗುತ್ತೆ. ನೀರಿರುವ ಬಾವಿಗಳನ್ನು ರಕ್ಷಣೆ ಮಾಡಿ ಸರಿಯಾದ ರೀತಿಯಲ್ಲಿ ಪಾಲಿಕೆಯಿಂದ ನಿರ್ವಹಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಪಾಲಿಕೆ ಮಾಜಿ ಸದಸ್ಯ ಗೂಳಪ್ಪ ಶೆಟಗಾರ ಮಾತನಾಡಿ, ಇಂಥ ಸಮಾಜಮುಖಿ ಕಾರ್ಯಗಳಿಂದ ಬಾವಿ ಸುತ್ತಮುತ್ತಲಿನ ಬಡಾವಣೆ ಸಾರ್ವಜನಿಕರಿಗೆ ದಿನಬಳಕೆಗೆ ಉಪಯೋಗಿಸಲು ನೀರು ಬರುತ್ತದೆ. ಪಾಳುಬಿದ್ದ ಬಾವಿಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಜನರ ಆರೋಗ್ಯ ಹಾಳಾಗುವ ಸಮಸ್ಯೆಗೆ ಮುಕ್ತಿ ದೊರೆತು ಪರಿಸರ ರಕ್ಷಣೆ ಆಗುತ್ತೆ ಎಂದರು.

ಸಂಸ್ಥೆ ವತಿಯಿಂದ ಅಪರ ಜಿಲ್ಲಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಸ್ವಚ್ಛತಾ ಕಾರ್ಯದಲ್ಲಿ ಪಾಟೀಲ ಫೌಂಡೇಷನ್, ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿ, ರಾಜೇಂದ್ರ ಫೌಂಡೇಷನ್, ಹ್ಯಾಪಿ ಕೇಕ್, ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್ ಮತ್ತು ಕ್ರಾಂತಿ ಅಸೋಸಿಯೇಷನ್‌ನವರು ಬೆಂಬಲಿಸಿ ಸ್ವಯಂ ಭಾಗಿಯಾದರು.

ಮಂಥನ ಜೋಶಿ, ಪ್ರವೀಣಗೌಡ ಪಾಟೀಲ, ಮಹಾಂತೇಶ್ ಕೆರೂಟಗಿ, ಆಕಾಶ್ ರಾಮತೀರ್ಥ, ನೂಹ್ ಪಠಾಣ್, ಅಮೀನ್ ಹುಲ್ಲೂರು, ಸತೀಶ ದೇಶಮುಖ ಸೇರಿ 50ಕ್ಕೂ ಹೆಚ್ಚು ಸ್ವಯಂಸೇವಕರು ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.